ಲಂಡನ್‌ ಪ್ಲಾನ್‌ ವಿಫಲವಾಗಿದೆ- ಫಲಿತಾಂಶ ಘೋಷಣೆಗೂ ಮುನ್ನ ಇಮ್ರಾನ್‌ ವಿಜಯದ ಭಾಷಣ

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಂತೆಯೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಇಲ್ಲಿಯವರೆಗೆ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ನಡುವೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿಜಯದ ಭಾಷಣವನ್ನು ಮಾಡಿದ್ದಾರೆ.

AI ಮೂಲಕ  ಅವರ ಧ್ವನಿಯನ್ನು ನೀಡಿ ಭಾಷಣದ ವಿಡಿಯೋವನ್ನು ಸೃಷ್ಟಿಸಿ ಬಿಡುಗಡೆ ಮಾಡಲಾಗಿದೆ.   ಪ್ರತಿಸ್ಪರ್ಧಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML- N) ಮುಖ್ಯಸ್ಥ ನವಾಜ್ ಷರೀಫ್ (Nawaz Sharif) ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕ್‌ ಚುನಾವಣೆ; ಪಿಎಂಎಲ್‌-ಎನ್‌ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ

ಇಮ್ರಾನ್‌ ಖಾನ್‌ ಹೇಳಿದ್ದೇನು..?: ನನ್ನ ಪ್ರೀತಿಯ ದೇಶವಾಸಿಗಳೇ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಮತ್ತು ನಿಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುವ ಮೂಲಕ ಸ್ವಾತಂತ್ರ್ಯದ ಮರುಸ್ಥಾಪನೆಗೆ ನೀವು ಅಡಿಪಾಯವನ್ನು ಹಾಕಿದ್ದೀರಿ. ಚುನಾವಣೆಯಲ್ಲಿ ಸುಸೂತ್ರವಾಗಿ ಗೆಲ್ಲಲು ಸಹಾಯ ಮಾಡಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

ನೀವೆಲ್ಲರೂ ಮತ ಚಲಾಯಿಸಲು ಬರುತ್ತೀರಿ ಎಂದು ನಾನು ನಂಬಿದ್ದೇ. ಅದರಂತೆ ನೀವೆಲ್ಲರೂ ನನ್ನ ನಂಬಿಕೆಯನ್ನು ಗೌರವಿಸಿದ್ದೀರಿ. ನೀವೆಲ್ಲರೂ ಅತೀ ಹೆಚ್ಚು ಮತಗಳನ್ನು ನೀಡಿದ್ದೀರಿ. ಇದು ಕೆಲವರಿಗೆ ಆಘಾತವುಂಟು ಮಾಡಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ‘ಲಂಡನ್ ಯೋಜನೆ’ ವಿಫಲವಾಗಿದೆ ಎಂದು ಇಮ್ರಾನ್‌ ಖಾನ್‌ ವಾಗ್ದಾಳಿ ನಡೆಸಿದರು.

ಇದೇ ವೇಳೆ ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡುತ್ತಾ, ಚುನಾವಣಾ ದುಷ್ಕೃತ್ಯಗಳನ್ನು ಯಾವುದೇ ಪಾಕಿಸ್ತಾನಿ ಒಪ್ಪಿಕೊಳ್ಳುವುದಿಲ್ಲ. ಹಿಂಸಾತ್ಮಕ ಘಟನೆಗಳ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ಸಹ ವ್ಯಾಪಕವಾಗಿ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ನಾವು 170 ಸ್ಥಾನಗಳನ್ನು ಗಳಿಸುವ ಮೂಲಕ ರಾಷ್ಟ್ರೀಯ ಅಸೆಂಬ್ಲಿಯನ್ನು ಗೆಲ್ಲುವ ಹಾದಿಯಲ್ಲಿದ್ದೇವೆ. ನನ್ನ ದೇಶವಾಸಿಗಳೇ, ನೀವೆಲ್ಲರೂ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ದಿನಾಂಕವನ್ನು ನಿಗದಿಪಡಿಸಿದ್ದೀರಿ. 2024ರ ಚುನಾವಣೆಯಲ್ಲಿ ನಾವು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುತ್ತೇವೆ. ನಿಮ್ಮ ಮತದ ಶಕ್ತಿಯನ್ನು ಎಲ್ಲರೂ ನೋಡಿದ್ದಾರೆ ಎಂದರು.

ಈ ನಡುವೆ ನವಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹಾಗೂ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಲಾಹೋರ್‌ನಲ್ಲಿ ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.