ಪಾಕ್ ಪ್ರಧಾನಿ ಬಳಿ ವಿದ್ಯುತ್ ಬಿಲ್ ಕಟ್ಟಲು ದುಡ್ಡಿಲ್ಲ

ನವದೆಹಲಿ: ಭಾರತದ ಮೇಲೆ ಪರಮಾಣು ದಾಳಿ ಮಾಡಲು ನಾವು ಸಿದ್ಧ ಎಂದು ಹೇಳಿಕೆ ನೀಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಗ ಪ್ರಧಾನಿ ಕಚೇರಿಯ ವಿದ್ಯುತ್ ಬಿಲ್ ಪಾವತಿಸಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಇಮ್ರಾನ್ ಖಾನ್ ಅವರು ತಮ್ಮ ಕಚೇರಿಯ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿಗಳ ಸಚಿವಾಲಯ ವಿದ್ಯುತ್ ಶುಲ್ಕ ಪಾವತಿಸಿಲ್ಲ ಎಂದು ಆಗಸ್ಟ್ 28 ರಂದು ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ (ಐಇಎಸ್ಕೊ) ನೋಟಿಸ್ ನೀಡಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ವರದಿಯ ಪ್ರಕಾರ, ಪಾಕಿಸ್ತಾನ ಪ್ರಧಾನಿ ಸಚಿವಾಲಯವು ಪ್ರಸ್ತುತ ಇಸ್ಲಾಮಾಬಾದ್ ವಿದ್ಯುತ್ ಸರಬರಾಜು ಕಂಪನಿ 41 ಲಕ್ಷ ರೂ ಬಿಲ್ ಕಟ್ಟಬೇಕು. ಆದರೆ ಈ ವಿಚಾರವಾಗಿ ಹಲವಾರು ಬಾರಿ ನೋಟಿಸ್‍ಗಳನ್ನು ಕಳುಹಿಸಿದ್ದರೂ ಸಹ ಸಚಿವಾಲಯವು ಬಾಕಿ ಪಾವತಿಸಲು ವಿಫಲವಾಗಿದೆ. ಹೀಗೆ ಬಿಲ್ ಪಾವತಿ ಮಾಡದೆ ಇದ್ದರೆ ಸಚಿವಾಲಯಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತೇವೆ ಎಂದು ಐಇಎಸ್ಕೊ ಮೂಲ ತಿಳಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಆರ್ಥಿಕತೆ ತೀವ್ರ ಕುಸಿತಗೊಂಡಿರುವ ಕಾರಣಕ್ಕೆ, ಅನಾವಶ್ಯಕವಾಗಿ ಮಾಡುವ ಖರ್ಚಿಗೆ ಬ್ರೇಕ್ ಹಾಕಲು ಇನ್ಮುಂದೆ ಸರ್ಕಾರಿ ಸಭೆಯಲ್ಲಿ ಟೀ, ಕಾಫಿ, ತಿಂಡಿ, ಬಿಸ್ಕೆಟ್ ಬ್ಯಾನ್ ಮಾಡಲಾಗಿದೆ. ಆರ್ಥಿಕತೆ ಕುಸಿತ ಕಂಡ ಕಾರಣಕ್ಕೆ ಪಾಕಿಸ್ತಾನ ಬೀದಿಗೆ ಬಿದ್ದಿದೆ. ಪಾಕಿಸ್ತಾನದಲ್ಲಿ ಎಷ್ಟರ ಮಟ್ಟಿಗೆ ಹಣಹಾಸಿನ ಅಭಾವ ಬಂದಿದೆ ಎಂದರೆ, ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಿ ಅತಿಥಿ ಗೃಹವನ್ನೇ ಬಾಡಿಗೆ ಕೊಡುವಷ್ಟರ ಮಟ್ಟಿಗೆ ಆರ್ಥಿಕತೆ ಕುಸಿತಗೊಂಡಿದೆ.

ಪಾಕಿಸ್ತಾನ ಕಚೇರಿಗಳಲ್ಲಿ ಕಾಫಿ, ಟೀ, ಬಿಸ್ಕೆಟ್ ಗೂ ಗತಿ ಇಲ್ಲದಂತಾಗಿದೆ. ಪಾಕಿಸ್ತಾನ ಸರ್ಕಾರದ ಯಾವುದೇ ಅಧಿಕೃತ ಸಭೆಗಳಲ್ಲಿ ಕಾಫಿ-ತಿಂಡಿ, ಟೀ, ಬಿಸ್ಕೆಟ್ ಕೊಡದಂತೆ ಸರ್ಕಾರ ಅಧಿಕಾರಿಗಳಿಗೆ ಆದೇಶ ನೀಡಿದೆ. ಅಲ್ಲದೆ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಗೂ ಕಡಿವಾಣ ಹಾಕಿದೆ. ಜೊತೆಗೆ ಮೋಟರ್ ಬೈಕನ್ನು ಹೊರತುಪಡಿಸಿ ಇನ್ನಿತರ ವಾಹನಗಳ ಖರೀದಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಈ ಹಿಂದೆ ಚೀನಾಗೆ ಕತ್ತೆ ರಫ್ತು ಮಾಡಿದ್ದ ಪಾಕ್ ಈಗ ಬೀದಿನಾಯಿಗಳನ್ನು ರಫ್ತು ಮಾಡಲು ನಿರ್ಧರಿಸಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಖರ್ಚು ಕಡಿಮೆ ಮಾಡಲು ಈ ರೀತಿ ಹೊಸ ನಿಯಮ ಜಾರಿಗೊಳಿಸಿದೆ. ಹಾಗೆಯೇ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚು ದಿನಪ್ರತಿಕೆ, ನಿಯತಕಾಲಿಕೆಗಳನ್ನು ತರಿಸಬೇಡಿ, ಕೇವಲ ಒಂದೇ ಪ್ರತಿಕೆ ಸಾಕು ಎಂದು ಸೂಚಿಸಿದೆ. ಹಾಗೆಯೇ ಸರ್ಕಾರಿ ಕಚೇರಿಗಳಲ್ಲಿ ಜೆರಾಕ್ಸ್ ಅಥವಾ ಪ್ರಿಂಟ್ ತೆಗೆಯುವಾಗ ಕಾಗದದ ಎರಡು ಬದಿಯಲ್ಲೂ ಪ್ರಿಂಟ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Comments

Leave a Reply

Your email address will not be published. Required fields are marked *