ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರೆ ಸಾರ್ವಜನಿಕ ಸ್ಥಳದಲ್ಲೇ ಗಲ್ಲು

– ಶುಕ್ರವಾರ ಪಾಕ್ ಸಂಸತ್ತಿನಲ್ಲಿ ನಿಲುವಳಿ ಪಾಸ್
– ಇಮ್ರಾನ್ ಖಾನ್ ಸರ್ಕಾರದ ಸಚಿವರಿಂದಲೇ ವಿರೋಧ
– 6 ತಿಂಗಳಲ್ಲಿ 1,304 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ

ಇಸ್ಲಾಮಾಬಾದ್: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ನಿಲುವಳಿ ಪಾಕಿಸ್ತಾನ ಸಂಸತ್ತು ಶುಕ್ರವಾರ ಅನುಮೋದನೆ ನೀಡಿದೆ.

ಪಾಕಿಸ್ತಾನದ ಸಂಸದೀಯ ರಾಜ್ಯ ವ್ಯವಹಾರಗಳ ಸಚಿವ ಅಲಿ ಮೊಹಮ್ಮದ್ ಖಾನ್ ಅವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ನಿಲುವಳಿ ಮಂಡಿಸಿದರು. ಈ ನಿಲುವಳಿಗೆ ಸಂಸತ್ತಿನಲ್ಲಿ ಸಾಕಷ್ಟು ಬೆಂಬಲ ದೊರಕಿತು. ಈ ಮೂಲಕ ಸಂಸದರು ಬಹುಮತದೊಂದಿಗೆ ನಿಲುವಳಿಯನ್ನು ಅಂಗೀಕರಿಸಿದ್ದಾರೆ.

ಆದರೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖಂಡ, ಮಾಜಿ ಪ್ರಧಾನಿ ರಾಜಾ ಪರ್ವೇಜ್ ಅಶ್ರಫ್, ಶಿಕ್ಷೆಯ ಕಠಿಣತೆಯನ್ನು ಹೆಚ್ಚಿಸುವುದರಿಂದ ಅಪರಾಧವನ್ನು ಎಂದಿಗೂ ಕಡಿಮೆ ಮಾಡಲು ಸಾಧ್ಯವಿಲ್ಲ. ನಾವು ಸಾರ್ವಜನಿಕ ಮರಣದಂಡನೆಯನ್ನು ತರಬಾರದು. ಏಕೆಂದರೆ ಅದು ವಿಶ್ವಸಂಸ್ಥೆಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಕೂಡ ಮಸೂದೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಫವಾದ್ ಚೌಧರಿ, ಇದು ಕೇವಲ ಶತಮಾನಗಳಷ್ಟು ಹಳೆಯ ನಾಗರಿಕತೆಯ ಕ್ರೂರ ಅಭ್ಯಾಸದಂತೆ ಕಾಣುತ್ತದೆ. ಸಮಾಜ ಯಾವಾಗಲೂ ಸಮತೋಲನವಾಗಿ ಕಾರ್ಯನಿರ್ವಹಿಸುತ್ತದೆ. ಚಿತ್ರಹಿಂಸೆ ಅಪರಾಧಗಳಿಗೆ ಉತ್ತರವಾಗಿರಬಾರದು. ಸಾರ್ವಜನಿಕವಾಗಿ ಗಲ್ಲಿಗೇರಿಸುವುದು ಧರ್ಮಾಂಧತೆಯ ಅಭಿವ್ಯಕ್ತಿಯಂತೆ ವ್ಯಕ್ತವಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಸರ್ಕಾರದ ಮಾನವ ಹಕ್ಕುಗಳ ಸಚಿವ ಶಿರಿನ್ ಮಜಾರಿ, ಈ ಪ್ರಸ್ತಾಪವನ್ನು ಸರ್ಕಾರವೇ ಜಾರಿಗೆ ತರಲು ನಿರ್ಧರಿಸಿಲ್ಲ. ಒಬ್ಬ ವ್ಯಕ್ತಿಯಿಂದ ಪರಿಚಯಿಸಲ್ಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಮೇಲೆ ಲೈಂಗಿಕ ಕಿರುಕುಳದ ಘಟನೆಗಳು ಪಾಕಿಸ್ತಾನದಲ್ಲಿ ಸಾಮಾನ್ಯವಾಗಿದೆ. ಮಕ್ಕಳ ಹಕ್ಕುಗಳ ಸಂಘಟನೆ ಸಾಹಿಲ್ ವರದಿಯ ಪ್ರಕಾರ, ಕಳೆದ ವರ್ಷ ಜನವರಿಯಿಂದ ಜೂನ್‍ವರೆಗೆ 1,304 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಅಂದರೆ ಪ್ರತಿದಿನ ಏಳು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಅನೇಕ ಪ್ರಕರಣಗಳು ಬೆಳಕಿಗೆ ಬಂದಾಗಿನಿಂದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಭಾರೀ ಟೀಕೆಗೆ ಗುರಿಯಾಗುತ್ತಿದೆ. ಅಂತಹ ಪ್ರಕರಣಗಳ ತನಿಖೆಯಲ್ಲಿನ ನ್ಯೂನತೆಗಳನ್ನು ಪರಿಹರಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಅಗತ್ಯ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ. ಇದರಿಂದಾಗಿ ಪಾಕ್ ಸರ್ಕಾರವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *