ಭಾರತದೊಂದಿಗೆ ಯುದ್ಧದ ಭವಿಷ್ಯ ನುಡಿದಿದ್ದ ಪಾಕ್ ಸಚಿವನಿಗೆ ವಿದ್ಯುತ್ ಶಾಕ್: ವಿಡಿಯೋ

– ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾಗ ಘಟನೆ

ಇಸ್ಲಾಮಾಬಾದ್: ಭಾರತದೊದಿಂಗೆ ಯುದ್ಧದ ಭವಿಷ್ಯ ನುಡಿದಿದ್ದ ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ಅವರಿಗೆ ವಿದ್ಯುತ್ ಶಾಕ್ ಹೊಡೆದ ಪ್ರಸಂಗ ಇಂದು ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾರ್ವಜನಿಕ ಸಮಾವೇಶದಲ್ಲಿ ಸಚಿವ ರಶೀದ್ ಅಹ್ಮದ್ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಟ್ಟದಾಗಿ ವಾಗ್ದಾಳಿ ನಡೆಸಿದ್ದರು. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದರಿಂದ ಸ್ವಲ್ಪ ಸಮಯ ಆತಂಕಕ್ಕೆ ಒಳಗಾದರು.

ಪ್ರಧಾನಿ ನರೇಂದ್ರ ಮೋದಿ ಅವರ ತಂತ್ರಗಳು ನಮಗೆ ತಿಳಿದಿವೆ ಎಂದು ಹೇಳಿದರು. ಈ ಮಾತಗಳನ್ನು ಉಚ್ಚರಿಸಿದ ಕೆಲವೇ ಸೆಕೆಂಡ್‍ಗಳಲ್ಲಿ ಅವರು ಹಿಡಿದಿದ್ದ ಮೈಕ್‍ನ ಕೇಬಲ್ ಬಲಗೈಗೆ ತಾಕಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದಿದೆ. ಸ್ವಲ್ಪ ಗಾಬರಿಯಾದ ಸಚಿವರು ಭಾಷಣ ಮುಂದುವರಿಸಿ, ನನ್ನ ಪ್ರಕಾರ ವಿದ್ಯುತ್ ಶಾಕ್ ನಂತರವೂ ಪ್ರಧಾನಿ ಮೋದಿ ಈ ಸಭೆಯ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾವಲ್ಪಿಂಡಿಯಲ್ಲಿ ಬುಧವಾರ ಕಾಶ್ಮೀರ ವಿಚಾರವಾಗಿ ಮಾತನಾಡಿದ ರಶೀದ್ ಅಹ್ಮದ್, ಭಾರತ-ಪಾಕ್ ನಡುವೆ ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿ ಯುದ್ಧ ನಡೆಯಲಿದೆ. ಈ ಬಾರಿಯ ಯುದ್ಧದ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದರು.

ವಿಶ್ವಸಂಸ್ಥೆ ನಿಜವಾಗಿಯೂ ಈ ಸಮಸ್ಯೆಯನ್ನು ಬಗೆಹರಿಸಲು ಬಯಸಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಅದು ಆಗಲಿಲ್ಲ ಎಂದು ಕಾಶ್ಮೀರ ವಿಚಾರವಾಗಿ ಮೌನವಾಗಿರುವ ಮುಸ್ಲಿಂ ದೇಶಗಳ ವಿರುದ್ಧವೂ ಸಚಿವರು ಅಸಮಾಧಾನ ಹೊರಹಾಕಿದ್ದರು.

ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಇನ್ನೂ ಮಾತುಕತೆ ಯೋಚಿಸುವವರು ಮೂರ್ಖರು. ಕಾಶ್ಮೀರ ವಿಚಾರ ಬಂದಾಗ ಚೀನಾ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ವಿಶ್ವಸಂಸ್ಥೆಯಲ್ಲಿ ಸೆಪ್ಟಂಬರ್ 27ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ಭಾಷಣ ಮಾಡಲಿದ್ದಾರೆ. ಚೀನಾದ ನಮ್ಮೊಂದಿಗೆ ನಿಂತಿರುವುದು ನಮ್ಮ ಅದೃಷ್ಟ ಎಂದು ಶೇಖ್ ರಶೀದ್ ಅಹ್ಮದ್ ಹೇಳಿದ್ದರು.

Comments

Leave a Reply

Your email address will not be published. Required fields are marked *