ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 8 ಕ್ಯಾಚ್‌ ಬಿಟ್ಟ ಪಾಕ್‌ – ಚರ್ಚೆ ಹುಟ್ಟುಹಾಕಿದ ಕಳಪೆ ಫೀಲ್ಡಿಂಗ್‌

– ಪಾಕ್‌ ಸೋಲಿನೊಂದಿಗೆ ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದ ಭಾರತ

ನವದೆಹಲಿ: ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೋಮವಾರ ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಹೀನಾಯ ಸೋಲಿನೊಂದಿಗೆ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಪಾಕಿಸ್ತಾನದ ಕಳಪೆ ಫೀಲ್ಡಿಂಗ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ನಿನ್ನೆ ನಡೆದ ನ್ಯೂಜಿಲೆಂಡ್‌ ವಿರುದ್ಧದ ಮ್ಯಾಚ್‌ನಲ್ಲಿ ಪಾಕಿಸ್ತಾನವು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನವನ್ನು ನೀಡಿತು. ಒಂದಲ್ಲ, ಎರಡಲ್ಲ ಬರೋಬ್ಬರಿ ಎಂಟು ಕ್ಯಾಚ್‌ಗಳನ್ನು ಆಟಗಾರರು ಬಿಟ್ಟಿದ್ದರಿಂದ 54 ರನ್‌ಗಳಿಂದ ಪಾಕ್‌ ಸೋಲನುಭವಿಸಿತು.

ಪಾಕಿಸ್ತಾನವು ನ್ಯೂಜಿಲೆಂಡ್ ಅನ್ನು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 110 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತ್ತು. ಆದರೆ ಎಂಟು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಲ್ಲದೇ, ಒಂದೆರಡು ರನ್-ಔಟ್ ಸಾಧ್ಯತೆಗಳನ್ನು ಸಹ ಮಾಡಲಿಲ್ಲ. ಪಾಕಿಸ್ತಾನದ ಫಾತಿಮಾ ಸನಾ ಸ್ವತಃ 4 ಕ್ಯಾಚ್‌ಗಳನ್ನು ಬಿಟ್ಟರು. ಇದು ಕಿವೀಸ್‌ ಗೆಲುವಿಗೆ ಅವಕಾಶಗಳನ್ನು ಮಾಡಿಕೊಟ್ಟಿತು.

111 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನವು ತಮ್ಮ ಎದುರಾಳಿಗಳ ಬೌಲಿಂಗ್‌ನ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಲಿಲ್ಲ. ಕೆಲವು ಕಳಪೆ ಶಾಟ್ ಆಯ್ಕೆ ಮತ್ತು ರೂಜ್ ಶೈಲಿಯ ಆಟದ ಪರಿಣಾಮವಾಗಿ ಪಾಕ್‌ 56 ಆಲೌಟ್‌ ಆಗಿ ಹೀನಾಯ ಸೋಲನುಭವಿಸಿತು. ಈ ಮೊತ್ತವು ಮಹಿಳೆಯರ ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಎರಡನೇ ಅತ್ಯಂತ ಕೆಟ್ಟ ಇತಿಹಾಸ ಬರೆದಿದೆ.

ಪಾಕಿಸ್ತಾನ ತಂಡದ ಸೋಲು ಈಗ ಚರ್ಚೆ ಹುಟ್ಟುಹಾಕಿದೆ. ಪಾಕಿಸ್ತಾನದ ಮಾಜಿ ಮಹಿಳಾ ತಂಡದ ನಾಯಕಿ ಸನಾ ಮಿರ್ ಕೂಡ ತಮ್ಮ ತಂಡದ ಆಟಗಾರರ ಪ್ರದರ್ಶನ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. 15 ವರ್ಷಗಳ ಆಟದಲ್ಲಿ ನಾನು ಇದನ್ನು ನೋಡಿಲ್ಲ ಎಂದು ಮಿರ್‌ ಪ್ರತಿಕ್ರಿಯಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನದ ಕೈಬಿಟ್ಟ ಕ್ಯಾಚ್‌ಗಳು: ಓವರ್‌ಗಳು 4.2, 5.2, 7.3, 15.5, 17.2, 19.1, 19.3 ಮತ್ತು 19.5 ಎಂದು ಮುಫದ್ದಲ್ ವೋಹ್ರಾ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಎಷ್ಟು ಕ್ಯಾಚ್‌ ಬಿಟ್ಟಿದೆ ಎಂಬುದು ನಿಮಗೆ ಗೊತ್ತೆ?’ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಮುನಾಫ್‌ ಪಟೇಲ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಈ ಪೋಸ್ಟ್‌ಗಳಿಗೆ ಬಗೆಬಗೆಯ ಕಾಮೆಂಟ್‌ಗಳು ಹರಿದುಬಂದಿವೆ. ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಕೆಲವರು ಕಾಮೆಂಟ್‌ ಮಾಡಿ ಟೀಕಿಸಿದ್ದಾರೆ. ಈ ರೀತಿಯ ಆಟವು ಅವರ ದೇಶದ ಅಸ್ಮಿತೆಯನ್ನು ತೋರಿಸುತ್ತದೆ ಎಂದು ಮತ್ತೆ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಪಾಕ್‌ ಆಟಗಾರರ ಬೆಂಬಲಕ್ಕೆ ನಿಂತು, ಪಂದ್ಯದ ಸೋಲಿಗೂ ಭಾರತದ ಸೆಮಿಫೈನಲ್‌ ಅರ್ಹತೆ ವಿಚಾರಕ್ಕೂ ತಳಕು ಹಾಕಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.