ಕಾಶ್ಮೀರ ಯಾವಾಗ ನಿಮಗೆ ಸೇರಿತ್ತು, ನೀವು ಅಳುತ್ತಿರೋದು ಯಾಕೆ – ಪಾಕಿಗೆ ರಾಜ್‍ನಾಥ್ ಪ್ರಶ್ನೆ

ಲೇಹ್: ಕಾಶ್ಮೀರ ಯಾವಾಗ ನಿಮಗೆ ಸೇರಿತ್ತೆಂದು ನೀವು ಅಳುತ್ತಿದ್ದೀರಿ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪ್ರಶ್ನಿಸಿ ಪಾಕ್ ವಿರುದ್ಧ ಹರಿಹಾಯ್ದಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) ಇಂದು ಲೇಹ್ ಲಡಾಖ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪಾಕಿಸ್ತಾನಕ್ಕೆ ಕೇಳ ಬಯಸುತ್ತೇನೆ. ಕಾಶ್ಮೀರ ಯಾವಾಗ ಪಾಕಿಸ್ತಾನದ ಭಾಗವಾಗಿತ್ತು? ಈ ಕುರಿತು ನೀವು ಯಆಕೆ ಅಳುತ್ತಿದ್ದೀರಿ ಎಂದು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಇಸ್ಲಮಾಬಾದ್‍ನಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಟೀಕಿಸಿದ್ದಾರೆ.

ಪಾಕಿಸ್ತಾನ ರಚನೆಯಾದಾಗಿನಿಂದ ಅದರ ಅಸ್ಥಿತ್ವವನ್ನು ನಾವು ಗೌರವಿಸಿದ್ದೇವೆ. ಕಾಶ್ಮೀರ ಯಾವಾಗಲೂ ಭಾರತದ ಭಾಗವಾಗಿದೆ. ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ನೆರೆಯ ಸಂಬಂಧವನ್ನು ಹೊಂದಲು ಬಯಸುತ್ತದೆ. ಆದರೆ ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸುವ ಕೃತ್ಯವನ್ನು ಬಿಡಬೇಕು ಎಂದು ಎಚ್ಚರಿಸಿದರು.

ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಬಳಿಕ ರಾಜನಾಥ್ ಸಿಂಗ್ ಅವರು ಮೊದಲ ಬಾರಿಗೆ ಲಡಾಖ್‍ಗೆ ಭೇಟಿ ನೀಡಿದ್ದು, ಇದೇ ವೇಳೆ ಲಡಾಖ್ ಪ್ರದೇಶದಲ್ಲಿ ಭದ್ರತೆಯನ್ನು ಕುರಿತು ಪರಿಶೀಲಿಸಿದರು.

ಪಾಕಿಸ್ತಾನ ಜಮ್ಮು ಕಾಶ್ಮೀರದ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೌರ್ಜನ್ಯಗಳನ್ನು ಪರಿಹರಿಸುವತ್ತ ಚಿತ್ತ ಹರಿಸಲಿ. ಜಮ್ಮು ಕಾಶ್ಮೀರದ ವಿಚಾರದಲ್ಲಿ ಯಾವೊಂದು ದೇಶವೂ ಸಹ ಪಾಕಿಸ್ತಾನದ ಜೊತೆಗಿಲ್ಲ ಎಂದು ರಾಜ್‍ನಾಥ್ ಸಿಂಗ್ ಹರಿಹಾಯ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಭಾರತದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪಾಕಿಸ್ತಾನ ವಿಶ್ವದ ಬೆಂಬಲ ಪಡೆಯಲು ಹಾತೊರೆಯುತ್ತಿದೆ. ಆದರೆ, ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು ಎಂದು ಹೆಚ್ಚಿನ ರಾಷ್ಟ್ರಗಳು ಒಪ್ಪಿಕೊಂಡ ನಂತರ ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೂಲಕ ಒತ್ತಡ ಹೇರುವ ಪಾಕಿಸ್ತಾನ ಪ್ರಯತ್ನಗಳೆಲ್ಲ ವಿಫಲವಾದವು. ಹೀಗಾಗಿ ಪಾಕಿಸ್ತಾನ ಮೈ ಪರಚಿಕೊಳ್ಳುತ್ತಿದೆ.

ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಬೇಕೆಂದು ವಿಶ್ವಸಂಸ್ಥೆ ಮೊರೆ ಹೋಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಎರಡೂ ದೇಶಗಳ ಮಧ್ಯೆ ಸಂಚರಿಸುವ ರೈಲು ಹಾಗೂ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

Comments

Leave a Reply

Your email address will not be published. Required fields are marked *