ಇಸ್ಲಾಮಾಬಾದ್: ನನ್ನ ಮಗಳು ಆರತಿ ಮಾಡುವಂತೆ ನಟಿಸುವದನ್ನು ನೋಡಿ ನಾನು ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಫ್ರಿದಿ ಪ್ರತಿಕ್ರಿಯಿಸಿದ್ದು, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ತಿಳಿಸಿದ್ದಾರೆ.
Shahid Afridi, a cricketer with a cult following in Pakistan bragging about how he broke his TV because his wife was watching an Indian TV serial and trying to do Arati. Watch the anchor cackle like a hyena and see the audience applaud. This is Pakistan! https://t.co/qBxmik3mJg
— Praveen Kumar (@RigidDemocracy) December 28, 2019
ನನ್ನ ಪತ್ನಿಯ ಕಾರಣದಿಂದಾಗಿ ಒಂದು ಬಾರಿ ಟಿವಿ ಒಡೆದಿದ್ದೇನೆ. ಭಾರತೀಯ ವಾಹಿನಿಯೊಂದರ ಡ್ರಾಮಾ ಶೋ ತುಂಬಾ ಜನಪ್ರಿಯವಾಗಿತ್ತು. ಈ ಶೋವನ್ನು ನನ್ನ ಪತ್ನಿ ನೋಡುತ್ತಿದ್ದಳು, ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ ಬಳಕೆದಾರರೊಬ್ಬರು ಈ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದೀಗ ಫುಲ್ ವೈರಲ್ ಆಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಅಫ್ರಿದಿ ಹೇಳಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರರ ದಾನಿಶ್ ಕನೇರಿಯಾ, ಹಿಂದೂ ಆಗಿದ್ದಕ್ಕೆ ತಂಡದಲ್ಲಿ ನನ್ನನ್ನು ಕೀಳಾಗಿ ನೋಡಲಾಗುತಿತ್ತು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಅಫ್ರಿದಿ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದರು.

ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದರು.
ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಶಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ಅವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಸಿಗಬೇಕಾದ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಶೋಯೆಬ್ ಅಖ್ತರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದರು. ಅಲ್ಲದೆ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದರು.

Leave a Reply