ಪಾಕಿಸ್ತಾನಿ ಪ್ರಜೆಗಳ ಬಂಧನಕ್ಕೆ ಟ್ವಿಸ್ಟ್ – ಪೊಲೀಸರಿಂದಲೇ ಪೊಲೀಸ್ ಪೇದೆ ವಿಚಾರಣೆ

ಬೆಂಗಳೂರು: ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಪೊಲೀಸ್ ಪೇದೆಯನ್ನು ವಿಚಾರಣೆ ಮಾಡಲಾಗುತ್ತಿದೆ.

ಕೆ.ಎಸ್.ಲೇಔಟ್ ಪೊಲೀಸ್ ಪೇದೆ ಇರ್ಫಾನ್‍ರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅರೋಪಿಗಳ ಪರಿಚಯವಿದ್ದ ಕಾರಣ ಪೇದೆಯ ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸಿಸಿಬಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದು, ಇಲ್ಲಿಯತನಕ ಐಬಿ, ಸ್ಟೇಟ್ ಇಂಟೆಲಿಜೆನ್ಸ್, ಸಿಸಿಬಿ, ರಾ, ಇಂಟರ್ನಲ್ ಸೆಕ್ಯೂರಿಟಿ, ಮಿಲಿಟರಿ ಇಂಟೆಲಿಜೆನ್ಸ್ ಸೇರಿದಂತೆ 7 ತನಿಖಾ ಸಂಸ್ಥೆಗಳಿಂದ ವಿಚಾರಣೆ ಮುಂದುವರೆದಿದೆ.

ಸದ್ಯಕ್ಕೆ ಯಾವುದೇ ಉಗ್ರರ ಜತೆ ಲಿಂಕ್ ಇರುವ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ ಸಿಸಿಬಿ ಅಧಿಕಾರಿಗಳಿಗೆ ಎರಡು ಪ್ರಮುಖ ಅನುಮಾನಗಳಿವೆ. ಯಾರೋ ಉಗ್ರರು ಇವರನ್ನು ಗಡಿ ದಾಟಿಸಿ ಕಳಿಸಿರುವ ಶಂಕೆ ಒಂದೆಡೆಯಾದ್ರೆ ಸ್ಲೀಪರ್ ಸೆಲ್ ಆಗಿ ಕೆಲಸ ಮಾಡ್ತಾರಾ ಅನ್ನೋ ಶಂಕೆಯೂ ಇದೆ. ಮುಂದಿನ ದಿನಗಳಲ್ಲಿ ಇವರನ್ನ ಸ್ಲೀಪರ್ ಸೆಲ್‍ಗಳಾಗಿ ಬಳಸೋ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿಯತನ ಸಿಸಿಬಿ 116 ಮಂದಿಯ ವಿಚಾರಣೆ ಮಾಡಿದೆ. ಅರೋಪಿಗಳು ಬೆಂಗಳೂರಿಗೆ ಬಂದ ಮೇಲೂ ಪಾಕಿಸ್ತಾನಕ್ಕೆ ಕರೆ ಮಾಡಿದ್ದು, 9 ತಿಂಗಳಲ್ಲಿ 18 ಮಂದಿಯ ಜತೆ ಸಂಪರ್ಕ ಮಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಪ್ರಕರಣದ ತನಿಖೆ ಪಾಕಿಸ್ತಾನ ತಲುಪಿದ್ದು, ರಾ ಸಂಸ್ಥೆಯಿಂದ ಅರೋಪಿಗಳ ಹಿನ್ನೆಲೆ ಪರಿಶೀಲನೆ ನಡೆಯುತ್ತಿದೆ. ಆರೋಪಿಗಳಿಗೆ 25 ಕ್ಕೂ ಹೆಚ್ಚು ಪಾಕಿಸ್ತಾನಿಗಳ ಜೊತೆ ಸಂಪರ್ಕ ಇದ್ದ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಗಳನ್ನು ರಾ ತನಿಖಾ ಸಂಸ್ಥೆಗೆ ಕಳುಹಿಸಲಾಗಿದೆ. ರಾ ಸಂಸ್ಥೆ ಈಗಾಗಲೇ ಅವರ ಮಾಹಿತಿಯನ್ನು ಕಲೆಹಾಕ್ತಿದೆ.

ಪಾಕಿಸ್ತಾನ ಪ್ರಜೆಗಳಿಗೆ ಆಧಾರ್ ಕಾರ್ಡ್ ನೀಡಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ನಾಗಲಕ್ಷ್ಮಮ್ಮ ಹಾಗೂ ಡಿ ಗ್ರೂಪ್ ನೌಕರ ಟಿ.ಎಚ್. ರವಿಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಇಬ್ಬರನ್ನೂ ಅಮಾನತು ಮಾಡಿ ಆರೋಗ್ಯ ಇಲಾಖೆ ಆಯುಕ್ತ ಸುಬೋಧ್ ಯಾದವ್ ಆದೇಶ ಹೊರಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *