ಕುತ್ತಿಗೆವರೆಗೂ ನೀರಿನಲ್ಲಿ ಮುಳುಗಿ ವರದಿ- ಪಾಕ್ ಪತ್ರಕರ್ತ ಫುಲ್ ಟ್ರೋಲ್

ಇಸ್ಲಾಮಾಬಾದ್: ಸಾಮಾನ್ಯವಾಗಿ ಯಾವುದಾರೂ ಹಬ್ಬ, ಸಮಾರಂಭ ಮುಂತಾದ ಪ್ರಮುಖ ಕಾರ್ಯಕ್ರಮಗಳಲ್ಲಿ ವರದಿಗಾರರು ವಿಡಿಯೋ ಮಾಡಲು, ಲೈವ್ ರಿಪೋರ್ಟ್ ಮಾಡಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೆ ಪಾಕ್ ವರದಿಗಾರನೊಬ್ಬ ಪ್ರವಾಹದ ನೀರಿನ ನಡುವೆ ನಿಂತು ವರದಿ ಮಾಡಿ ಇದೀಗ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾನೆ.

ಪ್ರವಾಹದ ನೀರಿನ ಮಧ್ಯೆ ನಿಂತು ವರದಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರದಿಗಾರ ಟ್ರೋಲ್ ಆಗಿದ್ದಾನೆ. ವರದಿಗಾರನನ್ನು ಆಜಾದರ್ ಹುಸೇನ್ ಎಂದು ಗುರುತಿಸಲಾಗಿದೆ. ಈತ ಕುತ್ತಿಗೆವರಗೂ ನೀರು ಬರುವಷ್ಟು ಪ್ರವಾಹದ ನೀರಿನಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲಿಂದನೇ ತನ್ನ ವಾಹಿನಿಗೆ ಲೈವ್ ರಿಪೋರ್ಟ್ ಕೊಟ್ಟಿದ್ದಾನೆ.

ವರದಿಗಾರ ಪ್ರವಾಹದ ನೀರಿನ ಮಧ್ಯೆ ನಿಂತು ವರದಿ ಮಾಡಿರುವ ವಿಡಿಯೋವನ್ನು ಚಾನೆಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಆ ವಿಡಿಯೋಗೆ “ಪಾಕಿಸ್ತಾನಿ ವರದಿಗಾರ ಪ್ರವಾಹದ ನೀರಿನಲ್ಲಿ ನಿಂತು ವರದಿ ಮಾಡುವ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಲು ತನ್ನ ಪ್ರಾಣವನ್ನೇ ಅಪಾಯದಲ್ಲಿರಿಸಿಕೊಂಡಿದ್ದಾನೆ” ಎಂದು ಬರೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ವರದಿಗಾರನನ್ನು ಟ್ರೋಲ್ ಮಾಡಿದ್ದಾರೆ. ಕೆಲವರು ವಿಡಿಯೋವನ್ನು ನೋಡಿ ಕಾಮಿಡಿಯಾಗಿ ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ವರದಿಗಾರನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅನೇಕರು ವರದಿಗಾರನಿಗೆ ಪುಲ್ಟಿಜರ್ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

Comments

Leave a Reply

Your email address will not be published. Required fields are marked *