Pahalgam Terrorist Attack – ಮತ್ತೋರ್ವ ಕನ್ನಡಿಗನ ಸಾವಿನ ಶಂಕೆ, ನಾಲ್ವರು ಕನ್ನಡಿಗರಿಗೆ ಗಾಯ: ತೇಜಸ್ವಿ ಸೂರ್ಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ (Pahalgam Terrorist Attack ) ಮತ್ತೋರ್ವ ಕನ್ನಡಿಗನ ಸಾವಿನ ಶಂಕೆ ಇದೆ. ನಾಲ್ವರು ಕನ್ನಡಿಗರು ಗಾಯಗೊಂಡ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಖಚಿತವಾಗಬೇಕಿದೆ ಎಂದು ಕಾಶ್ಮೀರದಲ್ಲಿರುವ ಸಂಸದ ತೇಜಸ್ವಿ ಸೂರ್ಯ (Tejasvi Surya) ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಬಾಲಬಿಚ್ಚಿದ್ದು, ಹಿಂದೂಗಳ ನರಮೇಧವಾಗಿದೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇಬ್ಬರು ವಿದೇಶಿಗರು ಸೇರಿದಂತೆ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‍ನಲ್ಲಿ ಮುಚ್ಚಲಾಗಿದೆ.

ಪ್ರವಾಸದ ಖುಷಿಯಲ್ಲಿದ್ದ ಪ್ರವಾಸಿಗರ ಬಳಿ ಏಕಾಏಕಿ ನುಗ್ಗಿರುವ ಟಿಆರ್‍ಎಫ್ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಅದರಲ್ಲೂ, ಪುರುಷರನ್ನೇ ಟಾರ್ಗೆಟ್ ಮಾಡಿ, ತಲೆಗೆ ಗನ್ ಇಟ್ಟು ನಿನ್ನ ಹೆಸರೇನು? ನಿನ್ನ ಧರ್ಮ ಏನು ಅಂತ ಕೇಳುತ್ತಲೇ ಕೊಂದಿದ್ದಾರೆ. ಉಗ್ರರ ಗುಂಡಿಗೆ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ.

ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್, ಶಿವಮೊಗ್ಗ ಮಂಜುನಾಥ್ ರಾವ್ ದುರ್ಮರಣಕ್ಕೀಡಾಗಿದ್ದಾರೆ. ಶಿವಮೊಗ್ಗದ ಮಂಜುನಾಥ್ ರಾವ್ (47) ಪತ್ನಿ ಪಲ್ಲವಿ, ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ತೆರಳಿದ್ದರು. ಇಂದು ಮಧ್ಯಾಹ್ನ 1:30ರ ಸುಮಾರಿಗೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಪತ್ನಿ, ಪುತ್ರನ ಕಣ್ಣೆದುರೇ ಮಂಜುನಾಥ್ ತಲೆಗೇ ಗುಂಡು ಹೊಡೆದಿದ್ದಾರೆ.