ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ರೂ, ರಾಜಸ್ಥಾನದಲ್ಲಿ ‘ಪದ್ಮಾವತ್’ಗೆ ಬಿಡುಗಡೆಯ ಭಾಗ್ಯ ಇಲ್ಲ

ಮುಂಬೈ: ಸಿನಿಮಾ ಸೆಟ್ಟೇರುತ್ತಲೇ ಹಲವು ವಿವಾದಗಳನ್ನು ಹುಟ್ಟುಹಾಕಿದ್ದ ಪದ್ಮಾವತ್ ಚಿತ್ರಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ಲಭಿಸಿದೆ. ಆದರೆ ರಾಜಸ್ಥಾನದಲ್ಲಿ ಮಾತ್ರ ‘ಪದ್ಮಾವತ್’ ಚಿತ್ರಕ್ಕೆ ನಿಷೇಧ ವಿಧಿಸಲಾಗಿದೆ. ರಾಜಸ್ಥಾನದ ವಸುಂಧರಾ ರಾಜೇ ಸರ್ಕಾರ ಸಿನಿಮಾ ಬಿಡುಗಡೆಗೆ ನಿಷೇಧ ಹೇರಿದ್ದಾರೆ.

ರಾಣಿ ಪದ್ಮಿನಿ ರಾಜಸ್ಥಾನದ ಗೌರವ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದ್ದು, ನಮಗೆ ಇತಿಹಾಸದಲ್ಲಿ ಪದ್ಮಾವತಿ ಕೇವಲ ಒಬ್ಬ ರಾಣಿಯಾಗಿ ಕಾಣಿಸಿಕೊಳ್ಳದೇ ರಾಜ್ಯದ ಹೆಮ್ಮೆಯ ಸಂಕೇತವಾಗಿದ್ದಾರೆ. ಈ ಕಾರಣದಿಂದ ಯಾವುದೇ ರೀತಿಯಲ್ಲಿ ರಾಣಿ ಪದ್ಮಿನಿ ಘನತೆಗೆ ಧಕ್ಕೆ ತರಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿಗಳು ಈ ಹಿಂದಿನಿಂದಲೂ ಚಿತ್ರ ಪ್ರದರ್ಶನ ನಿಷೇಧ ವಿಧಿಸಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ‘ಪದ್ಮಾವತ್’ ಸಿನಿಮಾ ಪ್ರದರ್ಶಿಸುವ ಹಾಗಿಲ್ಲ. ನಮಗೆ ಈಗಾಗಲೇ ಸಿನಿಮಾಗೆ ಸಂಬಂಧಿಸಿದಂತೆ ಆದೇಶ ತಲುಪಿದ್ದು, ಆದೇಶದನ್ವಯ ನಾವು ಕೆಲಸ ಮಾಡುತ್ತೇವೆ ಎಂದು ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಾಂದ್ ಕಟರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪದ್ಮಾವತ್ 2017 ಡಿಸೆಂಬರ್ 01ರಂದು ತೆರೆ ಕಾಣಬೇಕಿತ್ತು. ಆದ್ರೆ ದೇಶಾದ್ಯಂತ ಚಿತ್ರದ ವಿರೋಧವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಲಾಗಿತ್ತು. ಡಿಸೆಂಬರ್ 28ರಂದು ಸೆನ್ಸಾರ್ ಬೋರ್ಡ್ ಚಿತ್ರಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸೂಚಿಸಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಟೈಟಲ್ ಸೇರಿದಂತೆ ಕೆಲವು ಬದಲಾವಣೆಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕವೇ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದು ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪ್ರಸೂನ್ ಜೋಶಿ ಹೇಳಿದ್ದಾರೆ.

ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಅನುಮತಿ ದೊರಕಿದ ಕೂಡಲೇ ಚಿತ್ರತಂಡ ಇದೇ ತಿಂಗಳು 25ರಂದು ಸಿನಿಮಾವನ್ನು ತೆರೆಗೆ ತರಲು ತೀರ್ಮಾನಿಸಿದೆ. ಫಿಲ್ಮ್ ನಲ್ಲಿ ರಾಣಿ ಪದ್ಮಿನಿಯಾಗಿ ದೀಪಿಕಾ ಪಡುಕೋಣೆ, ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *