ದೇಶದೆಲ್ಲೆಡೆ ಬಿಡುಗಡೆಯಾಗಲಿದೆ ಪದ್ಮಾವತ್ – 4 ರಾಜ್ಯಗಳ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಬಿಡುಗಡೆಗಿದ್ದ ಅಡ್ಡಿ ದೂರವಾಗಿದ್ದು, ಇದೇ 25 ರಂದು ದೇಶದೆಲ್ಲೆಡೆ ಬಿಡುಗಡೆಯಾಗಬೇಕು ಎಂದು ಸುಪ್ರೀಂ ಹೇಳಿದೆ.

ನಾಲ್ಕು ರಾಜ್ಯಗಳಲ್ಲಿ `ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ರಾಜ್ಯಗಳ ಆದೇಶಕ್ಕೆ ತಡೆ ನೀಡಿದ ಪೀಠ ಕಾನೂನು ಸುವ್ಯಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕೆಲಸ ಎಂದು ಹೇಳಿತು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಬಿಡುಗಡೆ ನಿಷೇಧಿಸಿ ಹೊರಡಿಸಿದ್ದ ನಾಲ್ಕು ರಾಜ್ಯಗಳ ಆದೇಶಕ್ಕೆ ತಡೆ ನೀಡಿದೆ.

ಇದೇ ವೇಳೆ ಚಿತ್ರದ ಕುರಿತು ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿದರೆ ಭಾರತದ 60 ರಷ್ಟು ಸಾಹಿತ್ಯವನ್ನು ಓದುವ ಹಾಗೇ ಇಲ್ಲ ಎಂದು ಮುಖ್ಯ ನ್ಯಾ. ಮಿಶ್ರಾ ಅಭಿಪ್ರಾಯಪಟ್ಟರು. ಈ ವೇಳೆ ಚಿತ್ರ ನಿರ್ಮಾಣ ಮಾಡಿದ ಸಂಸ್ಥೆಯಾದ ವಿಯಾಕಾಮ್ 18 ಪರವಾಗಿ ವಾದಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ಚಿತ್ರ ಬಿಡುಗಡೆ ರಾಜ್ಯಗಳು ನಿಷೇಧ ಹೇರಿದ ಜೊತೆಗೆ ಅಭಿನಯಿಸಿದ ಕಲಾವಿದರಿಗೂ ಜೀವ ಬೆದರಿಕೆ ಬಂದಿದೆ. ಹೀಗಾಗಿ ಅವರಿಗೂ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.

ಅಂತಿಮವಾಗಿ ಪೀಠ ನಾಲ್ಕು ರಾಜ್ಯಗಳ ನಿಷೇಧ ವಿಧಿಸಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿತು.

ಚಿತ್ರೀಕರಣ ಆರಂಭವಾದ ಸಮಯದಿಂದಲೂ ಸಾಕಷ್ಟು ವಿವಾದಗಳಿಗೆ ‘ಪದ್ಮಾವತ್’ ಚಿತ್ರ ಕಾರಣವಾಗಿತ್ತು. ಹಲವು ಬಾರಿ ಕತ್ತರಿ ಪ್ರಯೋಗಿಸಿ ಬಳಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿತ್ತು. ನಿದೇರ್ಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರವನ್ನು ಜನವರಿ 25 ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದರು.

ಆದರೆ ಚಿತ್ರದ ಬಿಡುಗಡೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟಸಾಧ್ಯ ಎಂಬ ಕಾರಣ ನೀಡಿ, ಪದ್ಮಾವತ್ ಚಿತ್ರದ ಪ್ರದರ್ಶನಕ್ಕೆ ರಾಜಸ್ಥಾನ, ಹರಿಯಾಣ, ಗುಜರಾತ್, ಮಧ್ಯಪ್ರದೇಶ ಸರ್ಕಾರಗಳು ಚಿತ್ರ ಬಿಡುಗಡೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದರೂ ಸಿನಿಮಾವನ್ನು ತಡೆಯುವ ಹಕ್ಕು ಯಾವ ರಾಜ್ಯಕ್ಕೂ ಇಲ್ಲ. ತಮ್ಮ ಸಿನಿಮಾ ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆಯಾಗುವಂತೆ ಅವಕಾಶ ನೀಡಬೇಕೆಂದು ನಿರ್ಮಾಪಕರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಚಿತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಜೀವ ಬೆದರಿಕೆ ಇರುವ ಕಾರಣ ಯಾರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.

Comments

Leave a Reply

Your email address will not be published. Required fields are marked *