ಪದ್ಮಾವತ್ ಚಿತ್ರವನ್ನು ನೋಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ: ಮುಸ್ಲಿಮರಿಗೆ ಓವೈಸಿ ಕರೆ

ಹೈದರಾಬಾದ್: ಬಾಲಿವುಡ್ ನ ವಿವಾದಿತ ಚಿತ್ರ ಪದ್ಮಾವತ್ ಸಿನಿಮಾವನ್ನು ಮುಸ್ಲಿಮ್ ಯುವಜನತೆ ನೋಡಿ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.

ಅಖಿಲ ಭಾರತ ಅಭಿಯಾನದ ಭಾಗವಾಗಿ ಬುಧವಾರ ವಾರಂಗಲ್ ನಗರದಲ್ಲಿ ಏರ್ಪಡಿಸಿದ್ದ ‘ಸೆವ್ ಷರಿಯಾ’ (ಷರಿಯಾ ಉಳಿಸಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದ್ಮಾವತ್ ಸಿನಿಮಾ ಒಂದು ಪೌರಾಣಿಕ ಸಿನಿಮಾವಾಗಿದ್ದು, ರಜಪೂತ ರಾಣಿ ಪದ್ಮಾವತಿ ಹಾಗೂ ಚಕ್ರವರ್ತಿ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಕಾಲ್ಪನಿಕ ಕತೆಯನ್ನು ಆಧಾರಿಸಿದ್ದು. ಇದನ್ನು ಮುಸ್ಲಿಂ ಕವಿ ಮಲಿಕ್ ಮೊಹಮ್ಮದ ಜಯಸಿ 1540 ರಲ್ಲಿ ಪ್ರಾಸಂಗಿಕವಾಗಿ ಬರೆದಿದ್ದಾರೆ. ಇದು ಯಾವುದೇ ಐತಿಹಾಸಿಕ ಆಧಾರವನ್ನು ಹೊಂದಿಲ್ಲ. ಈ ಚಿತ್ರವನ್ನು ಯಾರು ನೋಡಬೇಡಿ ಎಂದು ಹೇಳಿದರು.

ಪದ್ಮಾವತ್ ಚಿತ್ರವೊಂದು ‘ಮನ್ಹೂಸ್’ (ಶಾಪ-ಸವಾರಿ) ಮತ್ತು ‘ಘಲೀಜ್’ (ಕೆಟ್ಟ) ಚಿತ್ರ ಎಂದ ಅವರು, ಕೇವಲ ಎರಡು ಗಂಟೆಯ ಚಿತ್ರ ವೀಕ್ಷಿಸಲು ದೇವರು ನಿಮ್ಮನ್ನು ಸೃಷ್ಟಿಸಿಲ್ಲ. ಉತ್ತಮ ಜೀವನ ನಡೆಸಲು ಹಾಗೂ ಒಳ್ಳೆಯ ಕೆಲಸಗಳನ್ನು ಮಾಡಲು ಸೃಷ್ಟಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು. ಪದ್ಮಾವತ್ ಚಿತ್ರವನ್ನು ವಿಮರ್ಶೆ ಮಾಡಲು 12 ಸದಸ್ಯರ ಸಮಿತಿ ಸ್ಥಾಪಿಸಿದ್ದು, ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ. ಆದರೆ ಮುಸ್ಲಿಂ ಷರಿಯಾ ಕಾನೂನಿನಲ್ಲಿ (ತ್ರಿವಳಿ ತಲಾಕ್) ತಿದ್ದುಪಡಿ ತರಲು ಯಾವ ಮುಸ್ಲಿಂ ಮುಖಂಡರ ಸಲಹೆಯನ್ನು ಪಡೆದಿಲ್ಲ ಎಂದು ಆರೋಪಿಸಿದರು.

ಪದ್ಮಾವತ್ ಚಿತ್ರದ ರಾಣಿಯ ಬೆಂಬಲಕ್ಕೆ ನಿಂತಿರುವ ರಜಪೂತರ ಹೋರಾಟಗಾರರ ಒಗ್ಗಟ್ಟನ್ನು ನೋಡಿ ಮುಸ್ಲಿಂ ಸಮುದಾಯ ಕಲಿಯಬೇಕಿದೆ. ಚಿತ್ರ ಬಿಡುಗಡೆ ವಿರೋಧಿಸಿ ಹೋರಾಟ ನಡೆಸಿದ್ದಾರೆ. ಆದರೆ ಮುಸ್ಲಿಂ ಕಾನೂನು ತಿದ್ದುಪಡಿ ವೇಳೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಲಿಲ್ಲ. ಮುಸ್ಲಿಂ ಸಮುದಾಯ ವಿಭಜನೆಯಾಗುತ್ತಿದೆ ಎಂದು ಹೇಳಿದರು.

 

 

Comments

Leave a Reply

Your email address will not be published. Required fields are marked *