ರೈತರ ಗದ್ದೆಯಲ್ಲಿ ಸಿಎಂ ಭತ್ತ ನಾಟಿ ಮಾಡೋದು ಗಿಮಿಕ್ ಅಷ್ಟೇ: ಕೆ.ಎಸ್.ಈಶ್ವರಪ್ಪ

ಮೈಸೂರು: ರೈತರ ಗದ್ದೆಯಲ್ಲಿ ಸಿಎಂ ಕುಮಾರಸ್ವಾಮಿಯವರು ಭತ್ತ ನಾಟಿ ಮಾಡುತ್ತಿರುವುದು ಕೇವಲ ಒಂದು ಗಿಮಿಕ್ ಅಷ್ಟೇ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರ ಗದ್ದೆಯಲ್ಲಿ ಕುಮಾರಸ್ವಾಮಿ ಭತ್ತ ನಾಟಿ ಮಾಡೋದು ಒಂದು ಗಿಮಿಕ್ ಆಗಿದ್ದು, ನಾಟಿ ಮಾಡುತ್ತಿರುವುದು ಒಂದು ಮಾಡೆಲ್ ನಾಟಕ ಎಂದು ವ್ಯಂಗ್ಯವಾಡಿ, ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಗಣ್ಯರ ಸತ್ಕಾರದ ಹೆಸರಿನಲ್ಲಿ ತೆರಿಗೆ ಹಣ ಲೂಟಿಯಾಗಿದೆ. ಸಿಎಂ ಪ್ರಕರಣವನ್ನು ತನಿಖೆ ನಡೆಸಬೇಕು. ಈ ಸರ್ಕಾರದಲ್ಲಿ ಎಲ್ಲಾ ರೀತಿಯಲ್ಲೂ ಲೂಟಿ ನಡೆಯುತ್ತಿದೆ. ಮೊದಲು ಬಗರ್ ಹುಕುಂ ರೈತರಿಗೆ ಭೂಮಿ ಕೊಡಿ ಎಂದು ಆಗ್ರಹಿಸಿದರು.

ಈಶ್ವರಪ್ಪ ಪೆದ್ದ, ಸಂವಿಧಾನ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಕಾನೂನು ಗೊತ್ತಾ, ನಾನು ಕೂಡ ಏ ಸಿದ್ದರಾಮಯ್ಯ ಅಂತಾ ಏಕವಚನದಲ್ಲಿ ಮಾತನಾಡಬಹುದು. ಆದರೆ ಅದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಸಿದ್ದರಾಮಯ್ಯನನ್ನು ಪೆದ್ದರಾಮಯ್ಯ, ದಡ್ಡ ಅಂತಾ ಕರಿಬೇಕೋ ಎಂದು ಪ್ರಶ್ನಿಸಿದ ಅವರು, ನೀವು ಏಕವಚನದಲ್ಲಿ ಮಾತನಾಡಿದರೆ ನಾವು ಕೂಡ ಕೆಟ್ಟ ಪದ ಬಳಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯಗೆ ಸೋತರು ಬುದ್ಧಿ ಬಂದಿಲ್ಲ. ಸಿದ್ದರಾಮಯ್ಯ ಅವರನ್ನ ಸೋಲಿಸಿದ್ದೇ ಡಾ.ಜಿ.ಪರಮೇಶ್ವರ್ ರವರು. ಈ ಹಿಂದೆ ಕೊರಟಗೆರೆಯಲ್ಲಿ ಪರಮೇಶ್ವರ್ ರವರನ್ನು ಸಿದ್ದರಾಮಯ್ಯ ಸೋಲಿಸಿದ್ದರು. ಈಗ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಪರಮೇಶ್ವರ್ ಸೋಲಿಸಿದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ನರೇಂದ್ರ ಮೋದಿಯನ್ನ ಇಡೀ ದೇಶವೇ ಒಪ್ಪಿದೆ. ಅವರನ್ನು ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಇಬ್ಬರು ಒಪ್ಪಲ್ಲ ಎಂದು ಹೇಳಿಕೆ ನೀಡಿದ್ದೆ. ಸಿದ್ದರಾಮಯ್ಯ ನೀವೇನ್ ಇಂಟರ್ ನ್ಯಾಷನಲ್ ಲೀಡರ್‍ರಾ ಎಂದು ಪ್ರಶ್ನಿಸಿ, ಅವರು ಸೋತ ಬಳಿಕ ಹುಚ್ಚ ಆಗಿದ್ದರೇನೋ ಅನಿಸುತ್ತೇ ಎಂದರು. ಅಲ್ಲದೇ ಇಂತಹ ಸ್ಥಿತಿಯಲ್ಲಿರೋ ಅವರನ್ನು ಪಕ್ಷ ರಾಷ್ಟ್ರೀಯ ಲೀಡರ್ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಶಾಸಕರು ಜೆಡಿಎಸ್ ಸೇರುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ಮುಂದಿನ ಒಂದು ವರ್ಷ ಕಾದು ನೋಡಿ ರೇವಣ್ಣ ಎಲ್ಲಿರುತ್ತಾರೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *