ಪಡ್ಡೆಹುಲಿ ಚಿತ್ರದಲ್ಲಿ ಪವರ್ ಸ್ಟಾರ್ ಪಾತ್ರವೆಂಥಾದ್ದು ಗೊತ್ತಾ?

– ನಾಳೆ ಲಾಂಚ್ ಆಗೋ ಟ್ರೈಲರ್ ನಲ್ಲಿದೆ ಪವರ್ ಸೀಕ್ರೆಟ್!

ಬೆಂಗಳೂರು: ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ನಟಿಸುತ್ತಿರೋ ಪಡ್ಡೆಹುಲಿ ಥೇಟರಿನಲ್ಲಿ ಘರ್ಜಿಸಲು ರೆಡಿಯಾಗಿದೆ. ಇದೇ ಏಪ್ರಿಲ್ ಹತ್ತೊಂಬತ್ತರಂದು ಈ ಚಿತ್ರ ತೆರೆ ಕಾಣಲಿರೋದು ಗೊತ್ತೇ ಇದೆ. ಆದರೆ ನಿರ್ದೇಶಕ ಗುರುದೇಶಪಾಂಡೆ ಸರ್‍ಪ್ರೈಸ್ ಗಳ ಸರಣಿಯನ್ನು ಮಾತ್ರ ಯಥಾ ರೀತಿಯಲ್ಲಿಯೇ ಮುಂದುವರೆಸಿದ್ದಾರೆ!

ಪಡ್ಡೆಹುಲಿಗೆ ಪವರ್ ಫುಲ್ ಸ್ಟಾರ್ ಒಬ್ಬರು ಸಾಥ್ ನೀಡಲಿದ್ದಾರೆಂಬ ಬಗ್ಗೆ ತಿಂಗಳ ಹಿಂದೆಯೇ ಗುಟ್ಟೊಂದು ಹೊರ ಬಿದ್ದಿತ್ತು. ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಬ ವಿಚಾರವೀಗ ಜಾಹೀರಾಗಿದೆ. ಈ ಸುದ್ದಿ ಕೇಳಿದಾಕ್ಷಣವೇ ಪವರ್ ಸ್ಟಾರ್ ಪಡ್ಡೆಹುಲಿಗೆ ಯಾವ ಪಾತ್ರದ ಮೂಲಕ ಜೊತೆಯಾಗಿದ್ದಾರೆ, ಅವರ ಗೆಟಪ್ ಹೇಗಿದೆ ಎಂಬ ಕ್ಯೂರಿಯಾಸಿಟಿ ಹುಟ್ಟೋದು ಸಹಜವೇ. ಇದನ್ನು ತಣಿಸಲೆಂದೇ ಟ್ರೈಲರ್ ಒಂದನ್ನು ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಟ್ರೈಲರ್ ನಾಳೆ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ.

ಹಾಗೆ ಲಾಂಚ್ ಆಗಲಿರೋ ಟ್ರೈಲರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಥಾ ಪಾತ್ರ ಮಾಡಿದ್ದಾರೆಂಬ ಅಂದಾಜು ಸಿಗಲಿದೆ. ಅಂದಹಾಗೆ ಪುನೀತ್ ಅವರಿಲ್ಲಿ ಯುವ ಸಮೂಹಕ್ಕೆ ಎನರ್ಜಿ ತುಂಬುವಂಥಾ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಕಡೇಯ ಹದಿನೈದು ನಿಮಿಷಗಳ ಕಾಲ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅದು ಇಡೀ ಕಥೆಗೆ ನಿರ್ಣಾಯಕ ತಿರುವು ಕೊಡುವಂಥಾ ಪಾತ್ರ.

ಈ ಮೂಲಕ ಯಂಗ್ ಟೈಗರ್ ಶ್ರೇಯಸ್ ಅವರ ಮೊದಲ ಚಿತ್ರಕ್ಕೆ ಸ್ಟಾರ್ ನಟರ ದಂಡೇ ಸಾಥ್ ಕೊಟ್ಟಂತಾಗಿದೆ. ಬರೀ ಮೈಲೇಜಿನ ದೃಷ್ಟಿಯಿಂದ ಸ್ಟಾರ್ ನಟರನ್ನು ಕರೆತಂದರೆ ಕಥೆಗೆ ಕಸಿವಿಸಿಯಾಗೋದೇ ಹೆಚ್ಚು. ಆದರೆ ನಿರ್ದೇಶಕ ಗುರು ದೇಶಪಾಂಡೆ ಕಥೆಯನ್ನು ಸೃಷ್ಟಿಸುವಾಗಲೇ ಈ ಪಾತ್ರಗಳನ್ನೂ ಸೃಷ್ಟಿಸಿದ್ದರು. ಆದ್ದರಿಂದಲೇ ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್ ಅವರ ಪಾತ್ರಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆಯಂತೆ.

ಈ ಮೂಲಕ ನಿರ್ಮಾಪಕ ಎಂ ರಮೇಶ್ ರೆಡ್ಡಿಯವರೂ ಕೂಡಾ ಖುಷಿಗೊಂಡಿದ್ದಾರೆ. ವ್ಯಾವಹಾರಿಕ ದೃಷ್ಟಿಯಾಚೆಗೆ ಪಡ್ಡೆಹುಲಿಯನ್ನು ಕನಸಿನಂತೆ ಪರಿಭಾವಿಸಿ ರೂಪಿಸಲು ಅನುವು ಮಾಡಿ ಕೊಟ್ಟವರು ರಮೇಶ್ ರೆಡ್ಡಿ. ಆ ಕಾರಣದಿಂದಲೇ ಪಡ್ಡೆಹುಲಿ ಪೊಗದಸ್ತಾದ ತಾರಾಗಣವನ್ನು ತನ್ನದಾಗಿಸಿಕೊಂಡಿದೆ.

Comments

Leave a Reply

Your email address will not be published. Required fields are marked *