ರಾಮನಗರ ಜೈಲಿನಲ್ಲಿ ಪಾದರಾಯನಪುರದ ಪುಂಡರು – ಮುಂದಿನ ಅನಾಹುತಕ್ಕೆ ಸರ್ಕಾರವೇ ಹೊಣೆ : ಎಚ್‍ಡಿಕೆ ಕಿಡಿ

ಬೆಂಗಳೂರು: ಪಾದರಾಯನಪುರದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಐವತ್ತನಾಲ್ಕು ಮಂದಿ ಪುಂಡರನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಕೊರೊನಾ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ರಾಮನಗರ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. ಚೋದ್ಯವೆಂದರೆ ರಾಮನಗರ ಜೈಲಿನ ಖೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ, ಪಾದರಾಯನಪುರದ ಪುಂಡರನ್ನು ರಾಮನಗರದ ಕಾರಗೃಹದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿಯನ್ನು ಒಂದೇ ಕೊಠಡಿಯಲ್ಲಿರಿಸುವ ಮೂಲಕ ಕೊರೊನಾ ಭೀತಿ ಎದುರಾಗಿದೆ. ಜಿಲ್ಲೆಯ ಜನತೆ ಭಯಗೊಂಡಿದ್ದಾರೆ. ಸರಕಾರ ತಕ್ಷಣವೇ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೋಮವಾರ ಸೆರೆ ಸಿಕ್ಕ 54 ಮಂದಿ ನ್ಯಾಯಾಂಗ ಬಂಧನಕ್ಕೆ ಒಳಗಾದವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಇರಿಸುವುದನ್ನು ಬಿಟ್ಟು ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸುವ ನಿರ್ಧಾರ ತಗೆದುಕೊಂಡವರು ಯಾರು? ನನಗಿರುವ ಮಾಹಿತಿ ಪ್ರಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಇಂತಹದ್ದೊಂದು ದುಡುಕು ನಿರ್ಧಾರಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಗೃಹ ಕಾರ್ಯದರ್ಶಿ ಅವರೊಂದಿಗೆ ಎರೆಡೆರಡು ಬಾರಿ ದೂರವಾಣಿಯಲ್ಲಿ ಚರ್ಚಿಸಿದ್ದೇನೆ. ರಾಮನಗರ ಜಿಲ್ಲೆಯ ಜನರು ಮತ್ತು ಜನ ಪ್ರತಿನಿಧಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಪ್ರತಿಭಟನೆಗೆ ಇಳಿಯದಂತೆ ಅವರ ಮನವೊಲಿಸಿದ್ದೇನೆ. ಇದನ್ನು ಸರಕಾರದ ಗಮನಕ್ಕೂ ತರಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪಾದರಾಯನಪುರ ಗಲಭೆ ಸಂಬಂಧ ಒಟ್ಟು ಈವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಈ ಎಲ್ಲರನ್ನೂ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಅಥವಾ ಯಾವುದಾದರೂ ಕಟ್ಟಡದಲ್ಲಿ ಸೂಕ್ತ ಬಂದೋಬಸ್ತ್ ಮಾಡಿ ಇಡುವುದು ಸೂಕ್ತ. ಸರಕಾರ ಇಂತಹ ಸೂಕ್ಷ ವಿಚಾರದಲ್ಲಿ ಜನತೆಯೊಂದಿಗೆ ಚೆಲ್ಲಾಟವಾಡದೇ ತಕ್ಷಣವೇ ತುರ್ತು ಅಗತ್ಯ ಕ್ರಮ ತಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಮನಗರ ಕಾರಾಗೃಹದಲ್ಲಿ ಅಡುಗೆಯವರು ಮತ್ತು ಶುಚಿತ್ವದ ಸಿಬ್ಬಂದಿ ವಾಸಿಸುತ್ತಿದ್ದು ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಗಲಭೆಕೊರರಿಂದ ಅಕಸ್ಮಾತ್ ಸೋಂಕು ತಗುಲಿದರೆ ಜಿಲ್ಲೆಯ ಸ್ವಾಸ್ಥ್ಯ ಹದಗೆಡುತ್ತದೆ ಎಂಬ ಕನಿಷ್ಠ ಪ್ರಜ್ಞೆ ಸರಕಾರಕ್ಕೆ ಬೇಡವೇ ಎಂದು ಪ್ರಶ್ನಿಸಿ ಕಿಡಿ ಕಾರಿದ್ದಾರೆ.

Comments

Leave a Reply

Your email address will not be published. Required fields are marked *