ಐಎನ್‍ಎಕ್ಸ್ ಹಗರಣ: ಪಿ.ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

– ಬಂಧನ ಭೀತಿಯಿಂದ ಸುಪ್ರೀಂ ಮೊರೆಹೋದ ಕಾಂಗ್ರೆಸ್ ಮುಖಂಡ

ನವದೆಹಲಿ: ಐಎನ್‍ಎಕ್ಸ್ ಮೀಡಿಯಾ ಅವ್ಯವಹಾರ ಹಗರಣ ಸಂಬಂಧ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ. ಹೀಗಾಗಿ ಬಂಧನ ಭೀತಿ ಎದುರಿಸುತ್ತಿರುವ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ಗೌರ್ ಅವರು ವಜಾಗೊಳಿಸಿದ್ದಾರೆ. ಇದರಿಂದಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಅವರು ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ತುರ್ತು ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.

ಚಿದಂಬರಂ ಅವರು ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುವುದು ಅಗತ್ಯವಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಡಿ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಕೋರ್ಟಿಗೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ಕೋರ್ಟ್ ಮನ್ನಣೆ ನೀಡಿದೆ.

ಚಿದಂಬರಂ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ (ಎಫ್‍ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ. ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆ ಲಭ್ಯವಾಗಿತ್ತು. ಆದರೆ ಪುತ್ರ ಕಾರ್ತಿ ಚಿದಂಬರಂ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಬಿಐ, 2017ರಲ್ಲಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು.

Comments

Leave a Reply

Your email address will not be published. Required fields are marked *