ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್‌ ಮುಖಂಡರು, ವಕೀಲರ ಆಕ್ರೋಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಪರ ವಕಾಲತು ವಹಿಸಲು ಮುಂದಾಗಿ ವಕೀಲರು ಹಾಗೂ ತಮ್ಮ ಪಕ್ಷದ ಕಾರ್ಯಕರ್ತರಿಂದಲೇ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮುಖಭಂಗ ಅನುಭವಿಸಿದ ಘಟನೆ ನಡೆದಿದೆ.

ನೀವು ಮಮತಾ ಬ್ಯಾನರ್ಜಿ ಅವರ ಏಜೆಂಟ್‌. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಿಮ್ಮ ಕಳಪೆ ಪ್ರದರ್ಶನದಿಂದಾಗಿಯೇ ಕಾಂಗ್ರೆಸ್‌ ನೆಲಕಚ್ಚಿತು. ವಾಪಸ್‌ ಹೋಗಿ ಎಂದು ಚಿದಂಬರಂ ವಿರುದ್ಧ ಘೋಷಣೆ ಕೂಗಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ರಕ್ಷಾಕವಚ ಭೇದಿಸುತ್ತಿವೆ ಭಯೋತ್ಪಾದಕರ ಬುಲೆಟ್‌ – ಹೊಸ ಬುಲೆಟ್‌ಪ್ರೂಫ್‌ ಜಾಕೆಟ್‌ ಬೇಕೆಂದ ಭಾರತೀಯ ಸೇನೆ

ಪಶ್ಚಿಮ ಬಂಗಾಳ ಸರ್ಕಾರದ ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ನಿರ್ಧಾರದ ವಿರುದ್ಧ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ಚೌಧರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಚಿದಂಬರಂ ಅವರು ತಮ್ಮದೇ ಪಕ್ಷದ ಚೌಧರಿ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರದ ಪರ ವಾದಿಸುತ್ತಿದ್ದಾರೆ. ಸ್ವತಃ ವಕೀಲರೂ ಆಗಿರುವ ಚಿದಂಬರಂ ಅವರು ಲಾಯರ್ ಕೋಟ್‌ ಧರಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದ್ದರು.‌ ವಾದ ವಿವಾದ ಬಳಿಕ ಕೋರ್ಟ್‌ನಿಂದ ನಿರ್ಗಮಿಸುವ ವೇಳೆ ಕಾಂಗ್ರೆಸ್‌ ವಕೀಲರು ಹಾಗೂ ನಾಯಕರು ಚಿದಂಬರಂ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೂಟಿ ಮಾಡಿದೆ. ನೀವು ಟಿಎಂಸಿಯನ್ನು ಉಳಿಸುತ್ತಿದ್ದೀರಿ. ನಿಮ್ಮಂತಹ ನಾಯಕರಿಂದ ನಾವು ಪಶ್ಚಿಮ ಬಂಗಾಳದಲ್ಲಿ ಬಳಲುತ್ತಿದ್ದೇವೆ. ನಿಮ್ಮಂತಹ ಜನರಿಂದ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು ನರಳುತ್ತಿದೆ. ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ ಎಂದು ಚಿದಂಬರಂ ವಿರುದ್ಧ ಪ್ರತಿಭಟನಾಕಾರರು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ಬಂಧಿಸುವುದು ಸರ್ಕಾರದ ಮುರ್ಖತನ: ಫಡ್ನವೀಸ್

ಇದೊಂದು ಸ್ವತಂತ್ರ ದೇಶ. ನನ್ನ ಬಳಿ ಯಾವುದೇ ಕಾಮೆಂಟ್‌ಗಳಿಲ್ಲ. ನಾನು ಈ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು ಎಂದು ಪ್ರತಿಭಟನೆ ಕುರಿತು ಚಿದಂಬರಂ ಅವರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *