ಮೋದಿಯಿಂದ ಬುಧವಾರ UAEಯ ಮೊದಲ ಹಿಂದೂ ದೇಗುಲ ಉದ್ಘಾಟನೆ – 65,000ಕ್ಕೂ ಹೆಚ್ಚು ಗಣ್ಯರ ನೋಂದಣಿ!

– ಪ್ರಧಾನಿ ಮೋದಿ ಹೇಳಿದ್ದೇನು?

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಿರ್ಮಾಣಗೊಂಡಿರೋ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ಮೋದಿ (Narendra Modi) ಫೆ.14ರಂದು (ಬುಧವಾರ) ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.13 ಮತ್ತು 14ರಂದು ಎರಡು ದಿನಗಳ ಕಾಲ ಮೋದಿ ಯುಎಇ ಪ್ರವಾಸ ಕೈಗೊಂಡಿದ್ದಾರೆ.

ಈಗಾಗಲೇ ಮಂದಿರ (Hindu Mandir) ಉದ್ಘಾಟನೆಗೆ ಭಾರೀ ತಯಾರಿ ಆರಂಭವಾಗಿದ್ದು, ಮಾ.1ರಿಂದ ಮಂದಿರವು ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಯುಎಇಯ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ ಅಬುಧಾಬಿಯಲ್ಲಿ 27 ಎಕರೆ ಪ್ರದೇಶದಲ್ಲಿ ಬೃಹತ್ ಹಿಂದೂ ದೇವಸ್ಥಾನವೊಂದನ್ನು ನಿರ್ಮಿಸಿದೆ. ಇಲ್ಲಿ ಕೃಷ್ಣ-ರಾಧೆ, ಶಿವ- ಪಾರ್ವತಿ ಮತ್ತು ರಾಮ-ಸೀತೆ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರರನ್ನ ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ, 180 ಅಡಿ ಅಗಲವಿದೆ.

65,000ಕ್ಕೂ ಹೆಚ್ಚು ನೋಂದಣಿ:
ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ಅಬುಧಾಬಿಯಲ್ಲಿ ನಡೆಯಲಿರುವ ‘ಅಹ್ಲಾನ್ ಮೋದಿ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆಗೆ ವ್ಯಕ್ತವಾಗಿದೆ. 65,000ಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದಾರೆ. ಈ ಕುರಿತು ಯುಎಇನಲ್ಲಿರುವ ಇಂಡಿಯನ್ ಪೀಪಲ್ ಫೋರಂ ಅಧ್ಯಕ್ಷ ಮತ್ತು ‘ಅಹ್ಲಾನ್ ಮೋದಿ’ ಉಪಕ್ರಮದ ನಾಯಕ ಜಿತೇಂದ್ರ ವೈದ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಇದು ಅತ್ಯಂತ ವಿಶಿಷ್ಟ ಕಾರ್ಯಕ್ರಮ, ಏಕೆಂದರೆ ಈ ಕಾರ್ಯಕ್ರಮವನ್ನು ಯಾವುದೇ ಒಂದು ಸಂಸ್ಥೆ ನಡೆಸುತ್ತಿಲ್ಲ. ಇಡೀ ಸಮುದಾಯ ಆಯೋಜಿಸುತ್ತಿದೆ. ಅಲ್ಲದೇ ಮೋದಿ ಅವರ ಹೆಸರು ಬಂದಾಗ, ಅಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಾರೆ. ಇದು ಮೋದಿ ಅವರ ಮೇಲೆ ಜನರಿಗೆ ಇರುವ ಪ್ರೀತಿ ಎಂದು ಶ್ಲಾಘಿಸಿದ್ದಾರೆ.

ಸಾಂಸ್ಕೃತಿಕ ವೈಭವಕ್ಕೆ ಸಿದ್ಧತೆ:
ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು ಸಾಂಸ್ಕೃತಿಕ ಕಾಯ್ರಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 700 ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನ ಪ್ರದರ್ಶಿಸಲಿದ್ದಾರೆ. ಈ ಮೂಲಕ ಭಾರತೀಯ ಕಲೆಗಳಿಗೆ ಜೀವತುಂಬುವ ಕೆಲಸ ಮಾಡಲಿದ್ದಾರೆ ಎಂದು ಜಿತೇಂದ್ರ ತಿಳಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ರಮವು ಕೋಮು ಸೌಹಾರ್ದತೆಯನ್ನು ಸಾಕಾರಗೊಳಿಸುವ ಉದ್ದೇಶ ಹೊಂದಿದೆ ಎಂದು ಕಾರ್ಯಕ್ರಮ ಸಮಿತಿ ತಿಳಿಸಿದೆ.

ಯುಎಇ ಭೇಟಿಗೆ ಮೋದಿ ಉತ್ಸುಕ:
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಯುಎಇಗೆ ನನ್ನ ಭೇಟಿಯು ಅಧಿಕಾರ ವಹಿಸಿಕೊಂಡ ನಂತರ ಏಳನೆಯದ್ದಾಗಿದೆ. ಇದು ಭಾರತ-ಯುಎಇ ಬಲವಾದ ಸ್ನೇಹಕ್ಕೆ ನಾವು ನೀಡುವ ಆದ್ಯತೆಯನ್ನು ಸೂಚಿಸುತ್ತದೆ. ನನ್ನ ಸಹೋದರ ಮೊಹಮ್ಮದ್ ಬಿನ್ ಝಾಯೆದ್ ಅವರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ. ಅದರಲ್ಲೂ ಯುಎಇಯಲ್ಲಿ ಮೊದಲ ಹಿಂದೂ ಮಂದಿರ ಉದ್ಘಾಟಿಸುವ ಗೌರವ ನನಗಿದೆ. ಅಬುಧಾಬಿಯಲ್ಲಿ ನಡೆಯುವ ಸಮುದಾಯ ಕಾರ್ಯಕ್ರಮದಲ್ಲಿ ನಾನು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.