ಪ್ರತಿ ಮಸೀದಿಯಿಂದ 200 ಮಂದಿ ಪ್ರತಿಭಟನೆಯಲ್ಲಿ ಭಾಗಿ

ಚಾಮರಾಜನಗರ: ಪೌರತ್ವ ಕಾಯ್ದೆ ವಿರುದ್ಧ ಇಂದು ನಗರದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ 2 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಮಸೀದಿಯಿಂದ 200 ಜನರು ಭಾಗವಹಿಸುತ್ತಿದ್ದಾರೆ.

ಚಾಮರಾಜನಗರ ತಾಲೂಕಿನಲ್ಲಿರುವ 20ಕ್ಕೂ ಹೆಚ್ಚು ಮಸೀದಿಗಳಿಂದ 200 ಜನರನ್ನು ಪ್ರತಿಭಟನೆಗೆ ಕರೆ ತರುವಂತೆ ಈಗಾಗಲೇ ಎಸ್‍ಡಿಪಿಐ ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಿದೆ. ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತ ಭವನದ ಮರೆಗೆ ನಡೆಯುವ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳಲಿದ್ದಾರೆ.

ದೊಡ್ಡಂಗಡಿ ಬೀದಿ ಪ್ರವೇಶವಿಲ್ಲ ನಗರದ ದೊಡ್ಡಂಗಡಿ ಬೀದಿಗೆ ಪ್ರತಿಭಟನಾಕಾರರು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಮೆರವಣಿಗೆ ವೇಳೆ ಅಂಗಡಿ-ಮುಂಗಟ್ಟುಗಳಿಗೆ ಹಾನಿಯಾಗಬಾರದು. ಅಲ್ಲದೆ ಈ ರಸ್ತೆಯಲ್ಲಿ ಸದಾ ಕಾಲ ಜನ ಜಂಗುಳಿ ಇರಲಿದೆ ಎಂದು ಇಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲ.

ಪ್ರವಾಸಿ ಮಂದಿರದಿಂದ ಬೆಳಗ್ಗೆ 10.30ಕ್ಕೆ ಹೊರಡುವ ಪ್ರತಿಭಟನಾಕಾರರು ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ರಸ್ತೆ, ಪಚ್ಚಪ್ಪ ವೃತ್ತ ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಲು ಅವಕಾಶ ದೊರೆತಿದೆ. ಭಾನುವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪೊಲೀಸರು ಮುಸ್ಲಿಂ ಮುಖಂಡರಿಗೆ ದೊಡ್ಡಂಗಡಿ ಬೀದಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.

ಕ್ಯಾಮರಾ ಕಣ್ಗಾವಲು ಬಂದೂಕು, ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡಲು ಸಜ್ಜಾಗಿರುವ ಪೊಲೀಸರು ಗುಂಪಿನ ನಡುವೆ ಕಿಡಿಗೇಡಿಗಳ ಕೃತ್ಯವನ್ನು ಸುಲಭವಾಗಿ ಪತ್ತೆ ಹಚ್ಚಲು ಹ್ಯಾಂಡಿ ಕ್ಯಾಂ(ಕ್ಯಾಮರಾ) ಬಳಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *