ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ

– ದಾಳಿಗೆ ಮೃತಪಟ್ಟವರ ಸಂಖ್ಯೆ 110 ಕ್ಕೆ ಏರಿಕೆ

ಮಾಸ್ಕೋ: ಇಲ್ಲಿನ ಕನ್ಸರ್ಟ್‌ ಹಾಲ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ 11 ಶಂಕಿತರನ್ನು ಬಂಧಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಯೋತ್ಪಾದಕ (Russia Terror Attack) ದಾಳಿಯಿಂದ 110 ಮಂದಿ ಸಾವನ್ನಪ್ಪಿದ್ದಾರೆ. 145 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಶಂಕಿತರನ್ನು ಅರೆಸ್ಟ್‌ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

ದಾಳಿಕೋರರು ಉಕ್ರೇನ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಯೋತ್ಪಾದಕ ದಾಳಿ ನಡೆಸಿದ ನಂತರ, ಅಪರಾಧಿಗಳು ರಷ್ಯಾ-ಉಕ್ರೇನಿಯನ್ ಗಡಿಯನ್ನು ದಾಟಲು ಉದ್ದೇಶಿಸಿದ್ದರು. ಉಕ್ರೇನಿಯನ್ ಭಾಗದಲ್ಲಿ ಸೂಕ್ತ ಸಂಪರ್ಕಗಳನ್ನು ಹೊಂದಿದ್ದರು ಎಂದು ರಷ್ಯಾದ ಭದ್ರತಾ ಸಂಸ್ಥೆ ಹೇಳಿದೆ.

ರಷ್ಯಾ ಆರೋಪವನ್ನು ಉಕ್ರೇನ್‌ ಅಲ್ಲಗಳೆದಿದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಉಕ್ರೇನ್‌ ಪ್ರೆಸಿಡೆನ್ಸಿಯು ತಿಳಿಸಿದೆ. ಉಕ್ರೇನ್‌ ಸ್ಪಷ್ಟನೆ ಬೆನ್ನಲ್ಲೇ, ಇಸ್ಲಾಮಿಕ್ ಸ್ಟೇಟ್ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿದೆ. ನಮ್ಮ ಸಹಚರರು ಮಾಸ್ಕೋದ ಹೊರವಲಯದಲ್ಲಿರುವ ದೊಡ್ಡ ಸಭೆ ಮೇಲೆ ದಾಳಿ ಮಾಡಿದರು. ನಂತರ ಸುರಕ್ಷಿತವಾಗಿ ತಮ್ಮ ನೆಲೆಗಳಿಗೆ ಹಿಂದಿರುಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ರಷ್ಯಾದಲ್ಲಿ ನಡೆದ ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ

ಚಹರೆ ಮರೆಮಾಚುವ ಸಮವಸ್ತ್ರ ಧರಿಸಿದ್ದ ದಾಳಿಕೋರರು ಕಟ್ಟಡ ಪ್ರವೇಶಿಸಿ ಗುಂಡು ಹಾರಿಸಿದ್ದಾರೆ. ಗ್ರೆನೇಡ್‌ ಅಥವಾ ಬಾಂಬ್‌ಗಳನ್ನು ಎಸೆದಿರಬಹುದು. ಸಭಾಂಗಣದಿಂದ ಜ್ವಾಲೆ ಮತ್ತು ಕಪ್ಪು ಹೊಗೆ ಹೊಮ್ಮುತ್ತಿರುವ ದೃಶ್ಯದ ವೀಡಿಯೋಗಳು ಎಲ್ಲೆಡೆ ವೈರಲ್‌ ಆಗಿವೆ.

ಮೂರು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಸಾವಿರಾರು ಮಂದಿ ಸೇರುವಷ್ಟು ವಿಸ್ತೀರ್ಣವಿದ್ದ ಕನ್ಸರ್ಟ್ ಹಾಲ್‌ ಮೇಲೆ ಯೋಜಿತ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಮಾಸ್ಕೋದಲ್ಲಿ ಉಗ್ರರ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ರಷ್ಯಾಗೂ ಎಚ್ಚರಿಕೆ ನೀಡಿತ್ತು – ಅಮೆರಿಕ