ಸಂತ್ರಸ್ತರ ನೆರವಿಗೆ ಬಾರದ ಸ್ವಾಭಿಮಾನಿ ಸಂಸದರೇ, ಎಲ್ಲಿದ್ದೀರಾ?- ಶ್ರೀನಿವಾಸ್ ಪ್ರಸಾದ್ ವಿರುದ್ಧ ಆಕ್ರೋಶ

ಚಾಮರಾಜನಗರ: ಜಿಲ್ಲೆಯ ಬಹುತೇಕ ಗ್ರಾಮಗಳು ಪ್ರವಾಹ ಎದುರಿಸುತ್ತಿವೆ. ಆದರೆ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಮಾತ್ರ ಈವರೆಗೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಜನರಿಗೆ ನೆರವು ಕೊಟ್ಟಿಲ್ಲ. ಹೀಗಾಗಿ ಸಿಟ್ಟಿಗೆದ್ದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಭಿಮಾನಿ ಸಂಸದರೇ, ಎಲ್ಲಿದ್ದೀರಾ? ಯಾರಾದರೂ ಸಂಸದರನ್ನ ಹುಡುಕಿ ಕೊಡಿ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಈಗಾಗಲೇ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಿಂದ ಅಂದಾಜು 500 ಎಕೆರೆ ಕೃಷಿ ಭೂಮಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಸಾವಿರಾರು ಜನರು ಮನೆಗಳನ್ನು ತೊರೆದು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇಷ್ಟೇಲ್ಲಾ ಆದರೂ ಕೂಡ ಸ್ಥಳಕ್ಕೆ ಭೇಟಿ ನೀಡಿ, ಜನರ ನೆರವಿಗೆ ಬಾರದೆ, ಜನರಿಗೆ ಧೈರ್ಯ ತುಂಬದ ಸಂಸದರ ವಿರುದ್ಧ ಜಿಲ್ಲೆಯ ಜನರು ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.

ಜಿಲ್ಲೆಯ ಹೆಚ್.ಡಿ ಕೋಟೆ, ಕೊಳ್ಳೇಗಾಲ, ನಂಜನಗೂಡಿನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನ-ಜಾನುವಾರುಗಳು ನಲುಗಿ ಹೋಗಿದೆ. ಆದರೆ ಸ್ವಾಭಿಮಾನಿ ಮಹಾರಾಜ್ ಶ್ರೀಮಾನ್ ಶ್ರೀನಿವಾಸ್ ಪ್ರಸಾದ್ ಅವರು ಸ್ವಾಭಿಮಾನಿ ಅಂತ ಹೇಳಿ ಮತಗಳನ್ನು ಪಡೆದು ಜನರ ಕಷ್ಟ ಕಾಲದಲ್ಲಿ ಕಾಣೆಯಾಗಿದ್ದಾರೆ. ಸಂಸದರನ್ನು ಹುಡುಕಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಬರೆದು ಜಲಾವೃತಗೊಂಡ ಗ್ರಾಮಗಳ ಕೆಲ ಫೋಟೋಗಳನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಹರಿಹಾಯ್ದಿದ್ದಾರೆ.

https://www.facebook.com/syed.musyeeb/posts/2345049638943889

Comments

Leave a Reply

Your email address will not be published. Required fields are marked *