ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ: ಸತೀಶ್ ಜಾರಕಿಹೊಳಿ

ದಾವಣಗೆರೆ: ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ. ಕೆಳಗೆ ನಿಂತು ನೋಡೋರಿಗೆ ಈಗ ಬೀಳುತ್ತೆ, ಆಗ ಬೀಳುತ್ತೆ ಅಂತ ಭಾಸವಾಗುತ್ತದೆ ಆದ್ರೆ ಬೀಳೋದಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ನಾಯಕರು ರಾಜ್ಯದಲ್ಲಿರುವ ಕೈ-ದಳದ ದೋಸ್ತಿ ಸರ್ಕಾರ ಬಿದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿಕೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಆದರೆ ಮೈತ್ರಿ ನಾಯಕರು ಮಾತ್ರ ನಮ್ಮ ಸರ್ಕಾರ ಸುಭದ್ರವಾಗಿದೆ ಯಾವುದೇ ತೊಂದರೆಯಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡುತ್ತಲೇ ಬರುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ವಿರೋಧ ಪಕ್ಷದ ಹೇಳಿಕೆಗೆ ವಿಮಾನದ ಕಥೆ ಹೇಳಿ ತಿರುಗೇಟು ನೀಡಿದರು.

ನಮ್ಮ ಸಮ್ಮಿಶ್ರ ಸರ್ಕಾರ ಆಕಾಶದಲ್ಲಿ ವಿಮಾನ ಹೋದಂತೆ. ಕೆಳಗೆ ನಿಂತು ನೋಡೋರಿಗೆ ಈಗ ಬೀಳುತ್ತೆ, ಆಗ ಬೀಳುತ್ತೆ ಅಂತ ಭಾಸವಾಗುತ್ತದೆ. ಆದರೆ ವಿಮಾನ ಬೀಳೋದಿಲ್ಲ, ಯಶಸ್ವಿಯಾಗಿ ಲ್ಯಾಂಡ್ ಆಗುತ್ತೆ. ಹಾಗೆಯೇ ನಮ್ಮ ಸರ್ಕಾರ ಕೂಡ ಬೀಳೋದಿಲ್ಲ, ಸಿಎಂ ಕುಮಾರಸ್ವಾಮಿ ಅವರೇ ಇನ್ನೂ 4 ವರ್ಷ ಸಿಎಂ ಆಗಿ ಅವಧಿ ಪೂರ್ಣಗೊಳಿಸುತ್ತಾರೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರುತ್ತೆ, ಸಚಿವ ಸಂಪುಟ ವಿಸ್ತರಣೆ ನಾಳೆ ಅಂತಿಮವಾಗುತ್ತೆ. ಯಾರು ಯಾರಿಗೆ ಸಚಿವ ಸ್ಥಾನ ಕೊಡುತ್ತಾರೋ ಗೊತ್ತಿಲ್ಲ. ಸಚಿವ ಸ್ಥಾನ ಸಿಗದಿದ್ದರೆ ಅಸಮಾಧಾನ ಸಹಜ. ಆದರೆ ನಮ್ಮ ವರಿಷ್ಠರು ಆ ಅಸಮಾಧಾನ ಶಮನಗೊಳಿಸುತ್ತಾರೆ. ಸದ್ಯಕ್ಕೆ ರಮೇಶ್ ಜಾರಕಿಹೊಳಿ ತಟಸ್ಥರಾಗಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆ ಆದ್ಮೇಲೆ ಏನ್ ಮಾಡುತ್ತಾರೋ ಕಾದು ನೋಡಬೇಕು ಎಂದರು.

ರಾಜನಹಳ್ಳಿಯಿಂದ ರಾಜಧಾನಿಯವರೆಗೆ ವಾಲ್ಮೀಕಿ ಸ್ವಾಮೀಜಿಯಿಂದ ಪಾದಯಾತ್ರೆ ಹಿನ್ನೆಲೆ ರಾಜನಹಳ್ಳಿ ವಾಲ್ಮೀಕಿ ಮಠಕ್ಕೆ ಜಾರಕಿಹೊಳಿ ಆಗಮಿಸಿ, ಪ್ರಸನ್ನಾನಂದಪುರಿ ಸ್ವಾಮೀಜಿಯ ಜೊತೆ ನಾವೆಲ್ಲರೂ ಇದ್ದೇವೆ ಎಂದು ಭರವಸೆ ನೀಡಿದರು. ಬಳಿಕ ಮಾತನಾಡಿ, ಸುಮಾರು ಸಲ ಹಿಂದಿನ ಹಾಗೂ ಇಂದಿನ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಶೈಕ್ಷಣಿಕ ಹಾಗೂ ಉದ್ಯೋಗ ಎರಡರಲ್ಲೂ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಅಗತ್ಯವಾಗಿ ಬೇಕು. ವರದಿಗಳು, ಕಾನೂನು ಎಲ್ಲವೂ ನಮ್ಮ ಪರವಾಗಿದೆ. ಹೀಗಾಗಿ ವಾಲ್ಮೀಕಿ ಸ್ವಾಮೀಜಿ ಪಾದಯಾತ್ರೆ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಬೆಂಗಳೂರಿನವರೆಗೆ ಯಾತ್ರೆ ಪೂರ್ಣಗೊಂಡ ನಂತರ ಅಲ್ಲಿ ಸಿಎಂ ಜೊತೆ ಸಭೆ ಮಾಡಿ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತೆ. ನಾವು ಈ ಜನಾಂಗದ ಜೊತೆ ಇದ್ದೇವೆ ಎಂದು ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *