ಉಡುಪಿ: ಕರ್ನಾಟಕದಲ್ಲಿ ಪ್ರತ್ಯೇಕತೆ ಕೂಗು ಎದ್ದಿದೆ. ಸಿಎಂ ಕುಮಾರಸ್ವಾಮಿ ಕರ್ನಾಟಕವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿಗೆ ಕರ್ನಾಟಕವನ್ನು ಛಿದ್ರವಾಗಿ ನೋಡುವ ಅಸೆ ಇದೆಯೇ? ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಹೊಣೆಗೇಡಿತನದಿಂದ ಮಾತನಾಡುವುದು ನಿಲ್ಲಿಸಿ. ತಾರತಮ್ಯ ಮಾಡುವುದನ್ನು ಪಲಾಯನ ಸೂತ್ರವನ್ನು ಅನುಸರಿಸಬೇಡಿ. ಅಪಸ್ವರ, ಆಕ್ರೋಶ ಇದ್ದ ಜನ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿ. ಪ್ರತ್ಯೇಕತೆ ಧನಿಗೆ ಸಿಎಂ ಕುಮಾರಸ್ವಾಮಿ ಕಾರಣ ಅಂತ ಅವರು ಆಕ್ರೋಶ ವ್ಯಕ್ತಪಡಿಸಿದ್ರು
ಕೈ-ತೆನೆ ಶಾಸಕರು ಬಿಜೆಪಿಯತ್ತ:
ಪ್ರತ್ಯೇಕತಾ ಹೋರಾಟದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ನಾವು ಯಾವ ಪಕ್ಷದ ಶಾಸಕರನ್ನು ಸೆಳೆಯಲ್ಲ. ಶಾಸಕರೇ ಬಿದ್ದರೆ ನಮ್ಮ ತಪ್ಪಿಲ್ಲ. ಕಾಂಗ್ರೆಸ್ ಗೆ ಜೆಡಿಎಸ್ ಎಂಬ ಧೃತರಾಷ್ಟ್ರನ ಆಲಿಂಗನವಾಗಿದೆ. ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್ ನ ಶಾಸಕರೇ ಮರುಗುತ್ತಿದ್ದಾರೆ. ಎಷ್ಟು ಜನ ಬಿಜೆಪಿಗೆ ಒಲವು ತೋರಿದ್ದಾರೆ ಅನ್ನೋ ಲೆಕ್ಕವನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೊಡುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಆದ ಅನ್ಯಾಯದಿಂದ ಶಾಸಕರು ಬಿಜೆಪಿಗೆ ಒಲವು ತೊರಿರಬಹುದು ಎಂದು ಹೇಳಿದರು.

ಇವರಿಗೆ ಶಾಸನ ಬೇಡ- ಶಾಸ್ತ್ರ ಮಾತ್ರ ಬೇಕು:
ರಾಜ್ಯ ಸರ್ಕಾರ ಶಾಸನದ ಮೇಲೆ ಆಡಳಿತ ನಡೆಸುತ್ತಿಲ್ಲ. ಸರ್ಕಾರ ಶಾಸ್ತ್ರದ ಆಧಾರದ ಮೇಲೆ ನಡೆಯುತ್ತಿದೆ. ಸಚಿವ ರೇವಣ್ಣ ಗಳಿಗೆ ಗಂಡಾಂತರ, ರಾಹುಕಾಲ ಗುಳಿಗಕಾಲ ನೋಡಿಕೊಂಡು ಕೆಲಸ ಮಾಡುತ್ತಾರೆ ಎಂದು ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದರು. ರೇವಣ್ಣ ಗಳಿಗೆ ನೋಡುತ್ತಾ ಸದನ ಮುಂದೂಡುತ್ತಾ ಬರುತ್ತಿದ್ದಾರೆ ಎಂದು ಟೀಕಿಸಿದರು.
ಧ್ವಜ ಹಾರಿಸಲು ಮಂತ್ರಿಗಳೇ ಇಲ್ಲ:
ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿ ನೇಮಕವಾಗಿಲ್ಲ. ಆಗಸ್ಟ್ 15 ಕ್ಕೆ ರಾಷ್ಟ್ರಧ್ವಜ ಆರೋಹಿಸಲು ಜನ ಬೇಕಲ್ವಾ ಅಂತ ಪ್ರಶ್ನೆ ಮಾಡಿದರು. ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಉಸ್ತುವಾರಿ ಮಂತ್ರಿ ನೇಮಕಕ್ಕೂ ಶಾಸ್ತ್ರ ನೋಡುವ ಪರಿಸ್ಥಿತಿ ಬಂದಿದೆ ಎಂದರು.
ಸಮನ್ವಯ ಸಮಿತಿ ಜಗಳ ಬಿಡಿಸುವ ಸಮಿತಿಯಾಗಿದೆ. ಜಗಳ ಮಾಡುವ ಮನಸ್ಥಿತಿಯವರೇ ಅದರ ಅಧ್ಯಕ್ಷರು ಅಂತ ಮಾಜಿ ಸಿಎಂ ಸಿದ್ದರಾಮಯ್ಯಗೆ ಪೂಜಾರಿ ಕುಟುಕಿದರು.

Leave a Reply