ನಮ್ಮ ಸಿಎಂ ಅಭಿಯಾನದಲ್ಲಿ ಕಾಂಗ್ರೆಸ್‍ನ ಮತ್ತೊಬ್ಬ ನಾಯಕರ ಹೆಸರು ಸೇರ್ಪಡೆ!

– ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಅಭಿಯಾನ ಆರಂಭ

ಬೆಳಗಾವಿ (ಚಿಕ್ಕೋಡಿ): ಕಾಂಗ್ರೆಸ್‍ನಲ್ಲಿ ‘ನಮ್ಮ ಸಿಎಂ’ ಅಭಿಯಾನ ಭಾರೀ ಸದ್ದು ಮಾಡುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನಲ್ಲೇ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗಿದೆ.

ಸಚಿವರ ಅಭಿಮಾನಿಗಳು, ನಮ್ಮ ಸಿಎಂ ಸತೀಶ್ ಜಾರಕಿಹೊಳಿ ಅವರು ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ‘ನಮ್ಮ ಸಿಎಂ ನಮ್ಮ ಸಾಹುಕಾರ್’ ಅಂತ ಹೇಳಿಕೊಂಡಿದ್ದಾರೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಕಾಗಬಾರದೂ ಎಂದು ಪ್ರಶ್ನಿಸಿದ್ದರು. ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹ ವ್ಯಕ್ತಿ ಅಂತ ಸಿದ್ದರಾಮಯ್ಯ ಬಿಂಬಿಸಿದ್ದರು. ಇದು ಅಭಿಮಾನಿಗಳ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ.

ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಹಿಂದೆಯೇ ಹೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್‍ನಲ್ಲಿ ಮತ್ತೊಬ್ಬ ನಾಯಕರ ಬೆಂಬಲಿಗರು ನಮ್ಮ ಸಿಎಂ ಅಭಿಯಾನವನ್ನು ಆರಂಭಿಸಿದ್ದು, ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಎನ್ನುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *