ಆಸ್ಕರ್ ಪ್ರಶಸ್ತಿ: ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಘೋಷಿಸಲು ಬೆತ್ತಲೆಯಾಗಿ ಬಂದ ನಟ

ಸ್ಕರ್ ‍ಪ್ರಶಸ್ತಿ (Oscar Award) ಪ್ರದಾನ ಸಮಾರಂಭದಲ್ಲಿ ಒಂದಿಲ್ಲೊಂದು ಎಡವಟ್ಟು ನಡೆಯೋದು ಕಾಮನ್ ಅನ್ನುವಂತಾಗಿದೆ. ಕೆಲವನ್ನು ಆಸ್ಕರ್ ಸಮಿತಿಯೇ ಡಿಸೈನ್ ಮಾಡಿದರೆ, ಇನ್ನೂ ಕೆಲವು ತಾನಾಗಿಯೇ ಅಲ್ಲಿ ನಡೆದು ಬಿಡುತ್ತವೆ. ಈವರೆಗೂ ನಡೆದ ಎಲ್ಲ ಸಂಗತಿಗಳು ವೈರಲ್ ಆಗುವುದರ ಜೊತೆಗೆ ವಿವಾದವನ್ನೂ ಹುಟ್ಟು ಹಾಕಿವೆ.

ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿಯನ್ನು ಘೋಷಣೆ ಮಾಡುವುದಕ್ಕಾಗಿ ಖ್ಯಾತ ಹಾಲಿವುಡ್ ನಟ, ಡಬ್ಲುಡಬ್ಲುಇ ಸ್ಟಾರ್ ಜಾನ್ ಸೇನಾ  (John Sena)ಬೆತ್ತಲೆಯಾಗಿ (Nude) ವೇದಿಕೆಗೆ ಬಂದಿದ್ದಾರೆ. ಸ್ಟೋರಿ ಬೋರ್ಡ್ ನಿಂದ ಖಾಸಗಿ ಅಂಗಾಂಗ ಮುಚ್ಚಿಕೊಂಡು ಮೈಕ್ ಮುಂದೆ ನಿಂತಿದ್ದಾರೆ. ನಂತರ ಅವರಿಗೆ ವೇದಿಕೆಯ ಮೇಲೆ ಡಿಸೈನರ್ ಬಟ್ಟೆ ತೊಡಿಸಲಾಗಿದೆ. ಈ ನಡೆ ಸಾಕಷ್ಟು ವಿರೋಧಕ್ಕೂ ಕಾರಣವಾಗಿದೆ.

ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು. ಅತ್ಯಂತ ಕುತೂಹಲ ಮೂಡಿಸಿದ್ದ ನಾಮ ನಿರ್ದೇಶನ ಪಟ್ಟಿಯಲ್ಲಿ ಯಾರೆಲ್ಲ ಪ್ರಶಸ್ತಿ ಪಡೆಯಲಿದ್ದಾರೆ ಎನ್ನುವ ಸಹಜ ನಿರೀಕ್ಷೆ ಇದ್ದೇ ಇತ್ತು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯು ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ ಪಡೆದುಕೊಂಡರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಚಿತ್ರ ಪ್ರಶಸ್ತಿಯು ಓಪನ್ ಹೈಮರ್ ಚಿತ್ರ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಓಪನ್ ಹೈಮರ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಓಪನ್ ಹೈಮರ್ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೆ, ದಿ ಹೋಲ್ಡೋವರ್ಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್‍ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದಿದ್ದರೆ, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರವೂ ಆಸ್ಕರ್ ಪ್ರಶಸ್ತಿ ಪಡೆದಿತ್ತು. ಈ ಬಾರಿ ಭಾರತದ ಯಾವುದೇ ಚಿತ್ರಕ್ಕೆ ಅಥವಾ ಡಾಕ್ಯುಮೆಂಟರಿಗೆ ಪ್ರಶಸ್ತಿ ಬಾರದೇ ನಿರಾಸೆ ಮೂಡಿಸಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಟು ಕಿಲ್ ಎ ಟೈಗರ್ ಸಾಕ್ಷ್ಯ ಚಿತ್ರವಿತ್ತು. ಆದರೆ, ಅದಕ್ಕೆ ಈ ಬಾರಿ ಪ್ರಶಸ್ತಿ ಬಂದಿಲ್ಲ.