New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಸಂಬಿತ್‌ ಪಾತ್ರ ತಿರುಗೇಟು

ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರು ಕರ್ನಾಟಕ ವಿಧಾನಸೌಧಕ್ಕೆ (Karnataka Vidhan Sabha) ಅಡಿಪಾಯ ಹಾಕಿದ್ದರು. ಕರ್ನಾಟಕದ ರಾಜ್ಯಪಾಲರು ಯಾಕೆ ಉದ್ಘಾಟನೆ ಮಾಡಲಿಲ್ಲ ಎಂದು ಬಿಜೆಪಿ ನಾಯಕ ಸಂಬಿತ್‌ ಪಾತ್ರ (Sambit Patra) ಪ್ರಶ್ನಿಸಿದ್ದಾರೆ.

 

ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೂತನ ಸಂಸತ್‌ ಭವನವನ್ನು (New Parliament Building) ಲೋಕಾರ್ಪಣೆ ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮವನ್ನು ರಾಷ್ಟ್ರಪತಿಗಳು ಮಾಡಬೇಕಿತ್ತು. ರಾಷ್ಟ್ರಪತಿಗಳು ಸಂಸತ್ ಭವನವನ್ನು ಉದ್ಘಾಟನೆ ಮಾಡದೇ ಇರುವುದು ರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಎಂದು ವಿಪಕ್ಷಗಳು ಆರೋಪಿಸಿವೆ. ಈ ಕಾರಣ ನೀಡಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ಸೇರಿದಂತೆ 19 ವಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಇದನ್ನೂ ಓದಿ: 200 ಯೂನಿಟ್ ಫ್ರೀ – ವಿದ್ಯುತ್‌ ಉಪಕರಣ ಖರೀದಿಗೆ ಫುಲ್ ಡಿಮ್ಯಾಂಡ್

ವಿಪಕ್ಷಗಳ ನಡೆಯನ್ನು ಖಂಡಿಸಿ ಸಂಬಿತ್‌ ಪಾತ್ರ ಟ್ವೀಟ್‌ ಮಾಡಿ ಈ ಹಿಂದೆ ಯಾವೆಲ್ಲ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಎಲ್ಲಿ ಏನು ಉದ್ಘಾಟನೆ ಮಾಡಿದ್ದಾರೆ ಎಂಬ ಪಟ್ಟಿಯನ್ನು ರಿಲೀಸ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ನಾಯಕರು ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದಾಗ ಯಾರೂ ಬಹಿಷ್ಕಾರ ಹಾಕಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ಮಾಜಿ ಪ್ರಧಾನಿ ಇಂದಿರಾಗಾಂಧಿ ಮಹಾರಾಷ್ಟ್ರ ವಿಧಾನ ಭವನವನ್ನು 1981ರಲ್ಲಿ ಉದ್ಘಾಟಿಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಸಂಸತ್ತಿನ ಗ್ರಂಥಾಲಯ ಕಟ್ಟಡಕ್ಕೆ 1987ರಂದು ಶಂಕುಸ್ಥಾಪನೆ ಮಾಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975ರ ಅಕ್ಟೋಬರ್‌ 24 ರಂದು ಪಾರ್ಲಿಮೆಂಟ್‌ ಹೌಸ್‌ ಅನೆಕ್ಸ್ ಉದ್ಘಾಟನೆ ಮಾಡಿದ್ದರು. ಅಂದು ಯಾರೂ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿರಲಿಲ್ಲ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ (Sonia Gandhi) ಅವರು ಮಣಿಪುರದ ಹೊಸ ಅಸೆಂಬ್ಲಿ ಸಂಕೀರ್ಣವನ್ನು ಉದ್ಘಾಟಿಸಿದ್ದರು. ಮಣಿಪುರದ ಹೊಸ ಅಸೆಂಬ್ಲಿ ಸಂಕೀರ್ಣ ಉದ್ಘಾಟನೆ ಮಾಡಲು ಸೋನಿಯಾ ಗಾಂಧಿ ಅವರಿಗೆ ಯಾವ ಅರ್ಹತೆಯಿದೆ? ಸೋನಿಯಾ ಗಾಂಧಿ ಅಧಕ್ಷರಾಗಿದ್ದಾರಾ? ಅಥವಾ ಮಣಿಪುರದ ಸಿಎಂ ಅಥವಾ ಮಣಿಪುರದ ರಾಜ್ಯಪಾಲರೇ?

ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ತಮಿಳುನಾಡು ಸರ್ಕಾರದ ಅಸೆಂಬ್ಲಿಯನ್ನು ಉದ್ಘಾಟನೆ ಮಾಡಿದ್ದರು. ತಮಿಳುನಾಡು ರಾಜ್ಯಪಾಲರು ಯಾಕೆ ಉದ್ಘಾಟನೆ ಮಾಡಿಲ್ಲ?

ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಚಂಡೀಗಢದ ವಿಧಾನಸಭೆ ಹೊಸ ಕಟ್ಡಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಶಂಕುಸ್ಥಾಪನೆ ನಡೆಸಲು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಯಾವ ಅರ್ಹತೆ ಇದೆ?