ವಿವಿಪ್ಯಾಟ್ ಎಣಿಕೆ – ವಿಪಕ್ಷಗಳ ಮನವಿ ತಿರಸ್ಕರಿಸಿದ ಚುನಾವಣಾ ಆಯೋಗ

ನವದೆಹಲಿ: ಮೊದಲು ವಿವಿಪ್ಯಾಟ್ ಸ್ಲಿಪ್‍ಗಳ ಎಣಿಕೆ ಮಾಡಿದ ಬಳಿಕ ಇವಿಎಂ ಎಣಿಕೆ ಮಾಡಬೇಕೆಂಬ ವಿರೋಧ ಪಕ್ಷಗಳ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.

ಮತ ಎಣಿಕೆ ಕಾರ್ಯಕ್ಕೆ ಒಂದು ದಿನ ಬಾಕಿ ಇರುವ ಸಂದರ್ಭದಲ್ಲಿ ಆಯೋಗ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ಇವಿಎಂ ಗಳ ಪರಿಶೀಲನೆ ಬಳಿಕವೇ ವಿವಿಪ್ಯಾಟ್ ಗಳನ್ನು ತಾಳೆ ನೋಡಲಾಗುವುದು ಎಂದಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡುವುದಾಗಿ ತಿಳಿಸಿದೆ.

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತ್ರತ್ವದಲ್ಲಿ 22 ವಿರೋಧ ಪಕ್ಷಗಳ ಮುಖಂಡರು ಮಂಗಳವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಮತದಾನ ವೇಳೆ ಮೊದಲು ಆಯ್ಕೆ ಮಾಡಿಕೊಳ್ಳುವ ಮತಪೆಟ್ಟಿಗೆಗಳನ್ನು ಇವಿಎಂಗಳೊಂದಿಗೆ ತಾಳೆ ಮಾಡಿ ಆ ಬಳಿಕ ಎಣಿಕೆ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದವು. ಒಂದೊಮ್ಮೆ ವಿವಿಪ್ಯಾಟ್ ತಾಳೆ ವೇಳೆ ಗೊಂದಲ ಉಂಟಾದರೆ ಶೇ.100 ವಿವಿಪ್ಯಾಟ್‍ಗಳನ್ನು ತಾಳೆ ಮಾಡುವಂತೆ ಮನವಿ ಮಾಡಲಾಗಿತ್ತು.

ವಿರೋಧಿ ಪಕ್ಷಗಳ ಮನವಿಯನ್ನ ಸ್ವೀಕರಿಸಿದ ಆಯೋಗ ಈ ಕುರಿತು ತೀರ್ಮಾನ ಕೈಗೊಳ್ಳಲು ಸಮಯವನ್ನು ಕೇಳಿತ್ತು. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿದ್ದ ಆಯೋಗ ಸದ್ಯ ವಿರೋಧಿ ಪಕ್ಷ ನಾಯಕರ ಮನವಿಯನ್ನು ತಿರಸ್ಕರಿಸಿದೆ.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬಹುಮತ ಪಡೆದು ಅಧಿಕಾರ ಪಡೆದ ಬಳಿಕ ಇವಿಎಂ ಮಿಷನ್ ಗಳನ್ನು ಟ್ಯಾಂಪರಿಂಗ್ ಬಗ್ಗೆ ವಿರೋಧಿ ಪಕ್ಷಗಳು ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೇ ಈ ಕ್ಷೇತ್ರದ ಎಲ್ಲಾ ಇವಿಎಂ ಗಳನ್ನು ವಿವಿಪ್ಯಾಟ್ ನೊಂದಿಗೆ ತಾಳೆ ಮಾಡುವಂತೆ ಆಯೋಗಕ್ಕೆ ಸೂಚನೆ ನೀಡಲು ಸುಪ್ರೀಂ ನಲ್ಲಿ ಮನವಿ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 5 ಮತ ಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳನ್ನು ತಾಳೆ ಮಾಡುವಂತೆ ಆಯೋಗಕ್ಕೆ ಸೂಚನೆ ನೀಡಿದೆ.

Comments

Leave a Reply

Your email address will not be published. Required fields are marked *