ಇನ್ನು ಮುಂದೆ ಕರೆನ್ಸಿ ಇಲ್ಲದೇ ಇದ್ರೂ ಕಾಲ್ ಮಾಡಬಹುದು!

ಬೀಜಿಂಗ್: ಇನ್ನು ಮುಂದೆ ನೀವು ಕರೆನ್ಸಿ ಇಲ್ಲದಿದ್ದರೂ ಮೊಬೈಲ್‍ನಲ್ಲಿ ನಿಮ್ಮ ಆಪ್ತರಿಗೆ ಕರೆ ಮಾಡಬಹುದು.

ಹೌದು, ಸ್ಮಾರ್ಟ್‍ಫೋನ್ ತಯಾರಕ ಚೀನಾದ ಒಪ್ಪೊ ಕಂಪನಿ ‘ಮೆಶ್‍ಟಾಕ್’ ಹೆಸರಿನ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಯಾವುದೇ ಸಿಮ್, ರೀಚಾರ್ಜ್, ವೈಫೈ, ಬ್ಲೂಟೂತ್ ಸಂಪರ್ಕವಿಲ್ಲದೆ ಕೇವಲ ಮೊಬೈಲ್ ಮೂಲಕ ಮಾತನಾಡುವ ಹಾಗೂ ಸಂದೇಶ ರವಾನಿಸುವ ಕ್ರಾಂತಿಕಾರಕ ತಂತ್ರಜ್ಞಾನವನ್ನು ಬಹಿರಂಗಪಡಿಸಿದೆ.

ಶಾಂಘೈನಲ್ಲಿ ನಡೆಯುತ್ತಿರುವ ಮೊಬೈಲ್ ವಲ್ರ್ಡ್ ಕಾಂಗ್ರೆಸ್(ಎಂಡಬ್ಲ್ಯೂಸಿ) ನಲ್ಲಿ ಈ ತಂತ್ರಜ್ಞಾನದ ಕುರಿತು ಒಪ್ಪೋ ಮಾಹಿತಿ ನೀಡಿದೆ. ಈ ತಂತ್ರಜ್ಞಾನದ ಸಹಾಯದಿಂದ ಒಂದು ಒಪ್ಪೊ ಮೊಬೈಲ್‍ನಿಂದ ಇನ್ನೊಂದು ಮೊಬೈಲ್‍ಗೆ ಯಾವುದೇ ಸಿಮ್, ರೀಚಾರ್ಜ್, ವೈಫೈ, ಬ್ಲ್ಯೂಟೂತ್ ಸಂಪರ್ಕವಿಲ್ಲದೆ, ಕೇವಲ ಮೆಶ್ ಟಾಕ್ ಆಪ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಈ ಆಪ್ ತೆರೆದ ನಂತರ ಯಾವುದೇ ಶುಲ್ಕವಿಲ್ಲದೆ ಹಾಗೂ ಸಂಪರ್ಕವಿಲ್ಲದೆ ಕರೆ ಅಥವಾ ಸಂದೇಶವನ್ನು ಕಳುಹಿಸಬಹುದಾಗಿದೆ.

‘ಮೆಶ್ ಟಾಕ್’ ಕೇವಲ ಮೂರು ಕಿ.ಮೀ.ಯೊಳಗೆ ಕಾರ್ಯ ನಿರ್ವಹಿಸಲಿದ್ದು, ನಗರ ಪ್ರದೇಶದ ಜನರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಲೋಕಲ್ ಏರಿಯಾ ನೆಟ್‍ವರ್ಕ್ (ಲ್ಯಾನ್) ನೆಟ್‍ವರ್ಕ್ ಮತ್ತು ರೀಲೇ ಕಮ್ಯೂನಿಕೇಶನ್ ವ್ಯವಸ್ಥೆ ಹೊಂದಿರುವ ಚಿಪ್ ಅಳವಡಿಸಲಾಗಿದ್ದು, ಕೇವಲ 3 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ತರಂಗಗಳು ಕಾರ್ಯ ನಿರ್ವಹಿಸುತ್ತವೆ. ಇದರ ಸಹಾಯದಿಂದ ಒಂದು ಒಪ್ಪೊ ಮೊಬೈಲ್‍ನಿಂದ ಇನ್ನೊಂದು ಒಪ್ಪೊ ಮೊಬೈಲ್‍ಗೆ ಸಂಪರ್ಕ ಸಾಧಿಸಬಹುದಾಗಿದೆ.

ಮೆಶ್ ಟಾಕ್‍ಗೆ ಯಾವುದೇ ರೀತಿಯ ಬೇಸ್ ಸ್ಟೇಷನ್ಸ್ ಅಥವಾ ಸರ್ವರ್‍ಗಳ ಅಗತ್ಯವಿಲ್ಲ ಹೀಗಾಗಿ ಗೌಪ್ಯತೆ ಕುರಿತು ಸಂದೇಹ ಬೇಡ ಎಂದು ಒಪ್ಪೊ ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಒಪ್ಪೋ ಬಹಿರಂಗ ಪಡಿಸಿಲ್ಲ. ಈ ತಂತ್ರಜ್ಞಾನವು ಭವಿಷ್ಯದ ಒಪ್ಪೊ ಮೊಬೈಲ್‍ಗಳಲ್ಲಿ ಲಭ್ಯವಿರುತ್ತದೆ ಎಂಬುದರ ಕುರಿತು ಸುಳಿವು ನೀಡಿದೆ.

Comments

Leave a Reply

Your email address will not be published. Required fields are marked *