ಅಣ್ವಸ್ತ್ರ ಸಂಗ್ರಹ ಇರೋ ಬೆಟ್ಟದ ಮೇಲೆ ದಾಳಿ ಚರ್ಚೆ – ಪತ್ರಕರ್ತನಿಗೆ ಥ್ಯಾಂಕ್ಸ್‌ ಹೇಳಿದ ವಾಯುಸೇನೆ

ನವದೆಹಲಿ: ಕಿರಾನಾ ಬೆಟ್ಟದಲ್ಲಿ (Kirana Hills) ಪರಮಾಣು ಸ್ಥಾವರವಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು ಎಂದು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎಕೆ ಭಾರ್ತಿ (Air Marshal Bharti) ಹೇಳಿದ್ದಾರೆ.

ಇಂದು ಮಧ್ಯಾಹ್ನ ಪಾಕ್‌ ವಿರುದ್ಧ ನಡೆಸಿದ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯ ಬಗ್ಗೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ವೈಸ್ ಮಾರ್ಷಲ್ ಎಕೆ ಭಾರ್ತಿ ಮತ್ತು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದ ಪ್ರತಿನಿಧಿಯೊಬ್ಬರು, ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಇರುವ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎಂದು ಚರ್ಚೆ ನಡೆಯುತ್ತಿದೆ. ಹೀಗಾಗಿ ಆ ಜಾಗದ ಮೇಲೆ ದಾಳಿ ನಡೆದಿದ್ಯಾ ಎಂದು ಪ್ರಶ್ನೆ ಮಾಡಿದರು.

ಈ ಪ್ರಶ್ನೆಗೆ ಎಕೆ ಭಾರ್ತಿ, ಕಿರಾನಾ ಬೆಟ್ಟದಲ್ಲಿ ಪರಮಾಣು ಸ್ಥಾವರವಿದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು. ನಮಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಉತ್ತರಿಸಿದರು. ಮುಂದುವರಿದು ಕಿರಾನಾ ಬೆಟ್ಟದ ಮೇಲೆ ನಾವು ಯಾವುದೇ ದಾಳಿ ಮಾಡಿಲ್ಲ. ಅಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ ಎಂದರು.

ಕಿರಾನಾ ಬೆಟ್ಟ ಎಲ್ಲಿದೆ?
ಸರ್ಗೋಧಾ  ವಾಯುನೆಲೆಯಿಂದ ರಸ್ತೆಯ ಮೂಲಕ ಕೇವಲ 20 ಕಿಮೀ ಮತ್ತು ಕುಶಾಬ್ ಪರಮಾಣು ಸ್ಥಾವರದಿಂದ 75 ಕಿಮೀ ದೂರದಲ್ಲಿ ಕಿರಾನಾ ಬೆಟ್ಟ ಇದೆ. ಸುಮಾರು 68 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ ಮತ್ತು 39 ಕಿ.ಮೀ ಪರಿಧಿಯಿಂದ ಸುತ್ತುವರೆದಿರುವ ಕಿರಾನಾ ಬೆಟ್ಟಗಳು ಬಹು-ಪದರದ ರಕ್ಷಣಾ ವ್ಯವಸ್ಥೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಒಳಗಡೆ ಕನಿಷ್ಠ 10 ಭೂಗತ ಸುರಂಗ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪಾಕ್‌ನ ಮಿರಾಜ್‌ ವಿಮಾನವನ್ನು ಹೊಡೆದ ಹಾಕಿದ ಭಾರತ

ಚರ್ಚೆ ಆಗುತ್ತಿರುವುದು ಯಾಕೆ?
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿದ್ದಾಗ ದಿಢೀರ್‌ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾರಣ ಕಿರಾನಾ ಬೆಟ್ಟದ ಮೇಲಿನ ದಾಳಿ ಎಂಬ ವಿಚಾರ ಕಳೆದ ಶನಿವಾರದಿಂದ ಜೋರಾಗಿ ಚರ್ಚೆ ಆಗುತ್ತಿದೆ.

ಭಾರತ ಮೇ 9 ಮತ್ತು 10ರ ರಾತ್ರಿ ಪಾಕಿಸ್ತಾನದ ಮೇಲೆ ಪ್ರಬಲವಾಗಿ ದಾಳಿ ನಡೆಸಿತ್ತು. ಅದರಲ್ಲೂ ವಾಯುಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಸೇನಾ ನೆಲೆಗಳ ಜೊತೆಯಲ್ಲಿ ಶಸ್ತ್ರಾಸ್ತ್ರ ಇರುವ ಜಾಗದ ಮೇಲೂ ಕ್ಷಿಪಣಿ ಹಾಕಿದೆ. ಈ ಪೈಕಿ ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಮತ್ತು ಮಿಲಿಟರಿ ಸಂಗ್ರಹಣಾ ಸ್ಥಳ ಕಿರಾನಾ ಬೆಟ್ಟದ ಮೇಲೆಯೇ ದಾಳಿ ನಡೆಸಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳಿಗೆ ರಹಸ್ಯವಾಗಿ ಅನುದಾನ ನೀಡಿತ್ತು ಅಮೆರಿಕ

ಕಿರಾನಾ ಬೆಟ್ಟ ಅಲ್ಲದೇ ಸರ್ಗೋಧಾ,  ಚಕ್ಲಾಲಾದ  ನೂರ್ ಖಾನ್ ವಾಯುನೆಲೆಯ ಮೇಲೆಯೂ ದಾಳಿ ನಡೆಸಿತ್ತು. ನೂರ್‌ ಖಾನ್‌ ವಾಯುನೆಲೆಯಲ್ಲಿ ಅಣ್ವಸ್ತ್ರಗಳ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಇತ್ತು. ಭಾರತ ಈ ವಾಯುನೆಲೆ ಮತ್ತು ಕಿರಾನಾ ಬೆಟ್ಟವನ್ನೇ ಗುರಿಯಾಗಿಸಿ ಮತ್ತಷ್ಟು ಬಾಂಬ್‌, ಕ್ಷಿಪಣಿ ದಾಳಿ ನಡೆಸಿದರೆ ಅಣ್ವಸ್ತ್ರಗಳು ಸ್ಫೋಟಗೊಳ್ಳಬಹುದು ಎಂಬ ಆತಂಕ ಪಾಕ್‌ಗೆ ಎದುರಾಗಿತ್ತು. ಒಂದು ವೇಳೇ ಸ್ಫೋಟಗೊಂಡರೆ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಭಾರೀ ಪರಿಣಾಮ ಬೀರುವ ಸಾಧ್ಯತೆ ಇತ್ತು. ಹೀಗಾಗಿ ಭಯಕ್ಕೆ ಬಿದ್ದ ಪಾಕಿಸ್ತಾನ ಅಮೆರಿಕವನ್ನು ಸಂರ್ಪಕಿಸಿ ಮಧ್ಯಪ್ರವೇಶ ಮಾಡುವಂತೆ ಕೇಳಿಕೊಂಡಿತ್ತು ಎನ್ನಲಾಗುತ್ತಿದೆ.

ಈ ವಿಚಾರಕ್ಕೆ ಪೂರಕ ಎಂಬಂತೆ ಕಿರಾನಾ ಬೆಟ್ಟದಿಂದ ಸ್ಫೋಟ ಸಂಭವಿಸಿ ಎತ್ತರಕ್ಕೆ ಹೊಗೆ ಹೊತ್ತಿರುವ ದೃಶ್ಯ ಸೆರೆಯಾಗಿತ್ತು. ವಿಡಿಯೋ ಮಾಡಿದ್ದ ವ್ಯಕ್ತಿಯೊಬ್ಬರು ಕಿರಾನಾ ಬೆಟ್ಟದ ಮೇಲೆ ದಾಳಿ ನಡೆದಿದೆ ಎಂದು ಹೇಳುತ್ತಿರುವ ಧ್ವನಿಯೂ ರೆಕಾರ್ಡ್‌ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ಡೊನಾಲ್ಡ್‌ಟ್ರಂಪ್‌ ಅವರು ಕದನ ವಿರಾಮ ಘೋಷಣೆ ಮಾಡಿದ ಪೋಸ್ಟ್‌ನಲ್ಲಿರುವ ಸಾಲು ಈಗ ವೈರಲ್‌ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ಬಲಿಷ್ಠ ಮತ್ತು ಅಚಲವಾದ ನಾಯಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಏಕೆಂದರೆ ಈಗಿನ ಆಕ್ರಮಣವನ್ನು ನಿಲ್ಲಿಸುವ ಸಮಯ ಬಂದಿದೆ, ಅದು ಅನೇಕರ ಸಾವು ಮತ್ತು ನಾಶಕ್ಕೆ ಕಾರಣವಾಗಬಹುದಿತ್ತು. ಲಕ್ಷಾಂತರ ಒಳ್ಳೆಯ ಮತ್ತು ಮುಗ್ಧ ಜನರು ಮೃತಪಡುವ ಸಾಧ್ಯತೆ ಇತ್ತು ಎಂದು ಬರೆದುಕೊಂಡಿದ್ದರು. ನೆಟ್ಟಿಗರು ಈಗ ಟ್ರಂಪ್‌ ಕಿರಾನಾ ಬೆಟ್ಟದ ಮೇಲಿನ ದಾಳಿಯನ್ನು ಉಲ್ಲೇಖಿಸಿಯೇ ಬರೆದಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.