ಕಾಫಿ ಡೇ ಮಾಲೀಕನ ಹುಡುಕಲು ‘ಆಪರೇಷನ್ ಸಿದ್ಧಾರ್ಥ್’

– ಮುರಳೀಧರ್ ಎಚ್.ಸಿ.
ಬೆಂಗಳೂರು: ಕಾಫಿ ಡೇ ಮಾಲೀಕ, ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಶೋಧ ಕಾರ್ಯ ‘ಆಪರೇಷನ್ ಸಿದ್ಧಾರ್ಥ್’ ಹೆಸರಲ್ಲಿ ನಡೆಯುತ್ತಿದೆ. ನಿನ್ನೆ ಸಂಜೆ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಸೇತುವೆ ಬಳಿಯಿಂದ ಸಿದ್ಧಾರ್ಥ್ ನಾಪತ್ತೆಯಾಗಿದ್ದಾರೆ.

ಪಾಂಡೇಶ್ವರ ಅಗ್ನಿಶಾಮಕ ಠಾಣೆಯಿಂದ 6 ಕಿಲೋಮೀಟರ್ ದೂರದ ಕಲ್ಲಾಪುವಿನಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಎಲ್ಲ ಸಿಬ್ಬಂದಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಸುಮಾರು 200 ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದಾರೆ.

ಯಾವೆಲ್ಲಾ ತಂಡಗಳು ಭಾಗಿ?
ಮಂಗಳೂರಿನಲ್ಲಿ ಸಿದ್ದಾರ್ಥ್ ಹುಡುಕಾಟ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿ ಹಾಗೂ ಬಳಕೆಯಾಗುವ ಯಂತ್ರಗಳು, ವಾಹನಗಳ ವ್ಯವಸ್ಥೆ ಹೀಗಿದೆ.

ಅಗ್ನಿಶಾಮಕ ದಳ: ಅಗ್ನಿ ಶಾಮಕ ಇಲಾಖೆಯಿಂದ 1 ರೆಸ್ಕ್ಯೂ ವಾಹನ, ಕ್ವಿಕ್ ರೆಸ್ಕ್ಯೂ ವಾಹನ 1, 2 ವಾಟರ್ ಟೆಂಡರ್ಸ್, 5 ಬೋಟ್ ವಿತ್ ಓಬಿಎಂ ಬಳಕೆಯಾಗುತ್ತಿದ್ದು 45 ಸಿಬ್ಬಂದಿ ಭಾಗಿಯಾಗಿದ್ದಾರೆ.

ಓರ್ವ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಇಬ್ಬರು ಡಿಸ್ಟ್ರಿಕ್ಟ್ ಫೈರ್ ಆಫೀಸರ್, ಫೈರ್ ಸ್ಟೇಷನ್ ಆಫೀಸರ್ 1, ಅಸಿಸ್ಟೆಂಟ್ ಫೈರ್ ಸ್ಟೇಷನ್ ಆಫೀಸರ್ 4, ಲೀಡಿಂಗ್ ಫೈರ್ ಮೆನ್ 7, ಫೈರ್ ಮೆನ್ ಡ್ರೈವರ್ 10, ಡ್ರೈವರ್ ಮೆಕಾನಿಕ್ 1, ಫೈರ್ ಮೆನ್ 18, ಎಸ್.ಡಿ.ಆರ್.ಎಫ್ (ಹೆಡ್ ಕಾನ್ಸ್ ಟೇಬಲ್) 1.

ಎನ್.ಡಿ.ಆರ್.ಎಫ್: ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 27 ಮಂದಿಯ ತಂಡ 4 ಬೋಟ್‍ಗಳು ಹಾಗೂ ಆಳ ಮುಳುಗು ತಜ್ಞರ ಜೊತೆ ಕಾರ್ಯಾಚರಣೆ ನಡೆಸುತ್ತಿದೆ.

ಕರಾವಳಿ ಕಾವಲು ಪಡೆ: ಕರಾವಳಿ ಕಾವಲು ಪಡೆಯ 2 ಕೋಸ್ಟಲ್ ಗಾರ್ಡ್ ಶಿಪ್ ಹಾಗೂ ಸಿಬ್ಬಂದಿ, 1 ಹೋವರ್ ಕ್ರಾಫ್ಟ್, 1 ಹೆಲಿಕಾಪ್ಟರ್ ಬಳಕೆಗೆ ಸಜ್ಜಾಗಿದೆ. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕಾಪ್ಟರ್ ಟೇಕಾಫ್ ಆಗಿಲ್ಲ.

ಹೋಮ್ ಗಾರ್ಡ್ಸ್: 8 ಹೋಮ್ ಗಾರ್ಡ್ ಸಿಬ್ಬಂದಿ, 1 ಬೋಟ್ ಹಾಗೂ ಔಟ್ ಬೋರ್ಡ್ ಮೋಟಾರ್ ಹಾಗೂ 4 ಈಜುಪಟುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಪೊಲೀಸ್ ಇಲಾಖೆ: ಪೊಲೀಸ್ ಇಲಾಖೆಯ 106 ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದಾರೆ. 2 ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್, 2 ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್, 2 ಪೊಲೀಸ್ ಇನ್ಸ್ ಪೆಕ್ಟರ್ಸ್, 50 ಪೊಲೀಸ್ ಪೇದೆಗಳು, 50 ಆರ್ಮ್ಡ್ ಪೊಲೀಸರು ಕಾರ್ಯಾಚರಣೆಯಲ್ಲಿದ್ದಾರೆ.

ಮುಳುಗು ತಜ್ಞರು, ಈಜುಗಾರರು: ಸ್ಥಳೀಯ ಮುಳುಗು ತಜ್ಞರ ತಂಡವೂ ಅಧಿಕಾರಿಗಳಿಗೆ ಸಾಥ್ ನೀಡಿದ್ದು, 7 ಮಂದಿ ನುರಿತ ಈಜುಪಟುಗಳು ಹಾಗೂ ಮುಳುಗು ತಜ್ಞರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *