ಕೊನೆಗೂ ಮುಂಬೈ ಹೋಟೆಲಿನಿಂದ ಹೊರ ಬಿದ್ದ ಕೈ ಶಾಸಕ ಜಾಧವ್!

ಕಲಬುರಗಿ: ಮುಂಬೈ ಹೋಟೆಲ್‍ನಿಂದ ಕೊನೆಗೂ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೊರ ಬಿದ್ದಿದ್ದಾರೆ. ಮುಂಬೈನಿಂದ ರಾತೋರಾತ್ರಿ ಬಂದಿಳಿದ ಚಿಂಚೋಳಿ ಶಾಸಕ ಜಾಧವ್ ಸ್ವಗ್ರಾಮ ಬೆಡಸೂರಿಗೆ ಆಗಮಿಸಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ಸಿನಿಂದ ದೂರವಾಗಿ ಮುಂಬೈಯಲ್ಲಿ ಕುಳಿತಿದ್ದ ಉಮೇಶ್ ಜಾಧವ್ ಯಾರ ಕೈಗೆ ಸಿಕ್ಕಿರಲಿಲ್ಲ. ಸ್ವಗ್ರಾಮ ಬೆಡಸೂರಿನಲ್ಲಿ ಜಾಧವ್ ತಂದೆ ಗೋಪಾಲ್ ಜಾಧವ್ ಅವರ ಪುಣ್ಯತಿಥಿ ಕಾರ್ಯಕ್ರಮ ಇಂದು ನಡೆಯಲಿರುವ ಹಿನ್ನೆಲೆಯಲ್ಲಿ ಮುಂಬೈನಿಂದ ಮರಳಿದ್ದಾರೆ.

ಉಮೇಶ್ ಜಾಧವ್ ತಂದೆಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಸೇರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಗೂ ಗೈರಾಗಿ ಕುತೂಹಲ ಮೂಡಿಸಿರುವ ಜಾಧವ್ ನಡೆ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ.

ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದ ಮುಂಬೈ ಸೇರಿರುವ ಕಾಂಗ್ರೆಸ್ ಶಾಸಕರು ಸದ್ಯ ಗೊಂದಲದಲ್ಲಿದ್ದು, ಮುಂದೆ ಏನು ಮಾಡಬೇಕು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ಆಪರೇಷನ್ ಕಮಲ ಸದ್ಯ ಬಹುತೇಕ ವಿಫಲವಾಗಿದೆ. ಶಾಸಕಾಂಗ ಸಭೆಗೂ ಗೈರಾಗಿರುವ ಅತೃಪ್ತ ನಾಲ್ವರಿಗೆ ಪಕ್ಷ ನೋಟಿಸ್ ಜಾರಿ ಮಾಡಿದೆ. ಮುಂಬೈನಲ್ಲಿ ಉಳಿದುಕೊಂಡಿರುವ ಶಾಸಕರು ನೋಟಿಸ್ ಗೆ ಉತ್ತರ ನೀಡಲೇಬೇಕಿದೆ.

ಪಕ್ಷೇತರ ಶಾಸಕರಿಬ್ಬರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಬಿಜೆಪಿಯ ಸಂಖ್ಯಾಬಲ 104 ರಿಂದ 106ಕ್ಕೆ ಏರಿಕೆಯಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ಅವರ ಮುಂದಿನ ನಡೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಮುಂಬೈ ಬಿಡುವಂತಿಲ್ಲ. ಇತ್ತ ಬೆಂಗಳೂರಿಗೂ ಬರುವಂತಿಲ್ಲ. ಮತ್ತೊಂದೆಡೆ ಬಿಜೆಪಿಗೆ ಹೋಗುವಂತಿಲ್ಲ ಹಾಗೂ ಕಾಂಗ್ರೆಸ್ ಕಡೆ ನೋಡುವ ಸ್ಥಿತಿಯಲ್ಲಿ ಅತೃಪ್ತ ಶಾಸಕರಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

 

Comments

Leave a Reply

Your email address will not be published. Required fields are marked *