ಉಪಹಾರ ಕೂಟದ ನೆಪದಲ್ಲಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಪ್ರತಿತಂತ್ರ!

ಬೆಂಗಳೂರು: ದೆಹಲಿಯಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲದ ತಂತ್ರ ರೂಪಿಸುತ್ತಿದ್ದಂತೆ ಇತ್ತ ರಾಜ್ಯದಲ್ಲೂ ಕಾಂಗ್ರೆಸ್ ನಾಯಕರು ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಹೌದು, ಆಪರೇಷನ್ ಕಮಲದ ಸುಳಿವು ದೊರೆಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಸೋಮವಾರ ಬೆಳಗ್ಗೆ ಸಭೆ ನಡೆಸಿದ್ದಾರೆ. ಉಪಹಾರ ಕೂಟದ ನೆಪದಲ್ಲಿ ಮಂತ್ರಿಗಳ ಜೊತೆ ದಿನೇಶ್ ಗುಂಡೂರಾವ್, ಪರಮೇಶ್ವರ್, ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

ಯಾವುದೇ ಕಾರಣಕ್ಕೂ ಆಪರೇಶನ್ ಕಮಲಕ್ಕೆ ಅವಕಾಶ ಮಾಡಿಕೊಡಬೇಡಿ. ದೋಸ್ತಿ ಸರ್ಕಾರದ ರಕ್ಷಣೆಗೆ ಎಲ್ಲರೂ ಬದ್ಧರಾಗಿರಿ. ಲೋಕಸಭೆ ಚುನಾವಣೆಯೇ ನಮಗೆ ಪ್ರಮುಖವಾಗಿದೆ. ಅಲ್ಲಿವರೆಗೂ ನಾವು ಹೆಚ್ಚು ಅಲರ್ಟ್ ಆಗಿರಬೇಕು. ನಿಮ್ಮ ನಿಮ್ಮ ಜಿಲ್ಲೆಯ ಶಾಸಕರ ರಕ್ಷಣೆ ಹೊಣೆ ನಿಮ್ಮದೇ. ಸಚಿವರೇ ಬಿ ಅಲರ್ಟ್ ಆಗಿರಿ ಎಂದು ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಸೂಚಿಸಿದ್ದಾರೆ. ಸಿದ್ದರಾಮಯ್ಯಮವರ ಮಾತಿಗೆ ಡಿಸಿಎಂ ಪರಮೇಶ್ವರ್ ಧ್ವನಿಗೂಡಿಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

ಮಾಧ್ಯಮಗಳಿಗೆ ಆಪರೇಶನ್ ಕಮಲದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬೇಡಿ. ಆಗಲಿ ಆಗದೇ ಹೋಗಲಿ ನೀವ್ಯಾರು ಪ್ರತಿಕ್ರಿಯೆ ನೀಡುವುದು ಬೇಡ. ಹೇಳಿಕೆ ನೀಡಿ ವಿನಾಕಾರಣ ಗೊಂದಲ ಸೃಷ್ಟಿಸಬೇಡಿ ಎಂದು ಹಿರಿಯ ನಾಯಕರು ಮಂತ್ರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜಯಮಾಲಾ, ರಹೀಂಖಾನ್, ರಾಜಶೇಖರ್ ಪಾಟೀಲ್, ಡಿಕೆ ಶಿವಕುಮಾರ್, ಪುಟ್ಟರಂಗ ಶೆಟ್ಟಿ, ತುಕಾರಂ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದರು. ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ದೇಶಪಾಂಡೆ, ಯುಟಿ ಖಾದರ್, ಶಿವಳ್ಳಿ ಗೈರಾಗಿದ್ದರು.

ಉಪಹಾರ ಕೂಟ ಮುಗಿಸಿ ಮಾಧ್ಯಮಗಳು ಸಭೆಯಲ್ಲಿ ಏನು ಚರ್ಚೆ ನಡೆದಿದೆ ಎಂದು ಕೇಳಿದ್ದಕ್ಕೆ ನೋ ರಿಯಾಕ್ಷನ್ ಎಂದು ಹೇಳಿದ ಸಿದ್ದರಾಮಯ್ಯ, ಪರಮೇಶ್ವರ್ ಅವರು ಉಪಹಾರವನ್ನು ಆಯೋಜಿಸಿದ್ದಾರೆ. ಸಭೆಯ ಬಗ್ಗೆ ಅವರೇ ಉತ್ತರಿಸುತ್ತಾರೆ ಎಂದು ಹೇಳಿ ತೆರಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *