ಬೆಂಗಳೂರು| ಹೊಸ ಇಂದಿರಾ ಕ್ಯಾಂಟೀನ್‍ಗಳಿಗೆ ಆರಂಭದಲ್ಲೇ ವಿಘ್ನ – 52 ಹೊಸ ಕ್ಯಾಂಟೀನ್‍ಗಳು ಓಪನ್ ಆಗೋದೇ ಡೌಟ್?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಹೊಸ ಇಂದಿರಾ ಕ್ಯಾಂಟೀನ್‍ಗಳ (Indira Canteens) ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. 52 ಹೊಸ ಇಂದಿರಾ ಕ್ಯಾಂಟೀನ್‍ಗಳು ಓಪನ್ ಆಗುವುದೇ ಡೌಟ್ ಎಂಬ ಪ್ರಶ್ನೆ ಎದ್ದಿದೆ.

ಕಳೆದ ವರ್ಷ ಕಾಂಗ್ರೆಸ್ (Congress) ಸರ್ಕಾರ ಬೆಂಗಳೂರಿನಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಶೀಘ್ರದಲ್ಲೇ ಟೆಂಡರ್ ಕರೆದು ನಿರ್ಮಾಣ ಕಾರ್ಯ ಶುರು ಮಾಡುವಂತೆ ಸಚಿವ ಸಂಪುಟ ತೀರ್ಮಾನಿಸಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ 52 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ (BBMP) ಟೆಂಡರ್ ಕೂಡ ಕರೆದಿತ್ತು. ಆದರೆ ಬಿಬಿಎಂಪಿ ಕರೆದಿದ್ದ ಟೆಂಡರ್‌ಗೆ ಯಾವ ಕಂಪನಿಯಾಗಲೀ, ಯಾರೊಬ್ಬರಾಗಲೀ ಭಾಗವಹಿಸಿಲ್ಲ. ಹೀಗಾಗಿ 52 ವಾರ್ಡ್‍ಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ

ಇನ್ನೂ ಟೆಂಡರ್‌ನಲ್ಲಿರುವ ಇರುವ ಟಫ್ ರೂಲ್ಸ್ ನಿರ್ಮಾಣಕ್ಕೆ ಇರುವ ವೆಚ್ಚದ ಸಮಸ್ಯೆಯೇ ಯಾರೊಬ್ಬರು ಭಾಗವಹಿಸದೇ ಇರಲು ಕಾರಣವಾಗಿದೆ. ಜೊತೆಗೆ ಈಗ ಆಗುತ್ತಿರುವ ಇಂದಿರಾ ಕ್ಯಾಂಟೀನ್‍ಗಳ ಅವ್ಯವಸ್ಥೆ, ಬಾಕಿ ಬಿಲ್ ಸಮಸ್ಯೆಯೇ ಟೆಂಡರ್‍ನಲ್ಲಿ ಭಾಗಿವಹಿಸದೇ ಇರೋದಕ್ಕೆ ಕಾರಣ ಅಂತಾ ಹೇಳಲಾಗುತ್ತಿದೆ. ಟೆಂಡರ್‍ನಲ್ಲಿರೋ ಕಠಿಣ ನಿಯಮಗಳ ರಿಲ್ಯಾಕ್ಸೇಷನ್‍ಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ವಿಕಾಸ್ ಸುರಳ್ಕರ್ ಮುಖ್ಯ ಆಯುಕ್ತರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ. ಮುಖ್ಯ ಆಯುಕ್ತರಿಂದ ಟೆಂಡರ್ ರಿಲ್ಯಾಕ್ಸೇಷನ್ ಸಿಕ್ಕಿದರೆ ಮತ್ತೆ ಟೆಂಡರ್ ಕರೆದು ಮುಂದಿನ ಎರಡು ವರ್ಷದ ಒಳಗಡೆ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಿದ್ದಾರೆ.

ಒಟ್ಟಾರೆ ಈ ವರ್ಷದಲ್ಲೇ 52 ಇಂದಿರಾ ಕ್ಯಾಂಟೀನ್‍ಗಳ ನಿರ್ಮಾಣ ಕಾರ್ಯ ಮುಕ್ತಾಯ ಆಗಬೇಕಿತ್ತು. ಆದರೆ ಇದಾಗದೇ ಇರುವುದು ಸಿದ್ದರಾಮಯ್ಯ ಅವರ ಕನಸಿನ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆಯಾಗಿದೆ.