ಎಮರ್ಜೆನ್ಸಿ ಅಂಬುಲೆನ್ಸ್‌ನಿಂದ್ಲೇ ರೋಗಿಗಳ ಜೀವಕ್ಕೆ ಕುತ್ತು

-ಪಬ್ಲಿಕ್ ಟಿವಿ ಸ್ಟಿಂಗ್ ಕ್ಯಾಮೆರಾದಲ್ಲಿ ಬಯಲು

ಬೆಂಗಳೂರು: 108 ಅಂಬುಲೆನ್ಸ್ ರೋಗಿಗಳ ಪಾಲಿಗೆ ಮಿನಿ ಸಂಜೀವಿನಿ ಇದ್ದಂತೆ. ತುರ್ತು ಆರೋಗ್ಯ ಚಿಕಿತ್ಸೆಗೆ ಕ್ಷಣಾರ್ಧದಲ್ಲೇ ರೋಗಿಯ ಪ್ರಾಣವನ್ನು ಉಳಿಸುವ ಕೆಲಸ ಮಾಡುವ ಈ ಅಂಬುಲೆನ್ಸ್ ಇದೀಗ ಸಾವಿನ ಹಾದಿಯನ್ನು ತೋರಿಸುತ್ತಿವೆ.

ರಾಜಧಾನಿ ಬೆಂಗಳೂರಿನಲ್ಲಿರುವ ಅಂಬುಲೆನ್ಸ್‌ಗಳಿಗೆ ವೆಂಟಿಲೇಟರ್ ಕೊರತೆ ಉಂಟಾಗಿದೆ. ಬೆಂಗಳೂರಿನಲ್ಲಿ ಒಟ್ಟು 73 ಅಂಬುಲೆನ್ಸ್‌ಗಳಿವೆ. ಈ ಪೈಕಿ ಕೇವಲ 17ರಲ್ಲಿ ಮಾತ್ರ ವೆಂಟಿಲೇಟರ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವುದಕ್ಕೆ ತುಂಬಾ ಸಮಸ್ಯೆಯಾಗಿದೆ. ವೆಂಟಿಲೇಟರ್ ಇರುವ ಖಾಸಗಿ ಅಂಬುಲೆನ್ಸ್ ಡ್ರೈವರ್‌ಗಳು, ಇದನ್ನೇ ಬಂಡಾವಳ ಮಾಡಿಕೊಂಡು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ತುರ್ತು ಪರಸ್ಥಿತಿಯಲ್ಲಿರುವ ರೋಗಿಯನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಲು ಕೈ ತುಂಬಾ ಹಣ ನೀಡಲೇಬೇಕು. ಪಬ್ಲಿಕ್ ಟಿವಿ ಸ್ಟಿಂಗ್ ತಂಡ ಖಾಸಗಿ ಅಂಬುಲೆನ್ಸ್ ಡ್ರೈವರ್‌ಗಳ ಜೊತೆ ಮಾತಿಗಿಳಿದಾಗ ಈ ಬಗ್ಗೆ ಮಾಫಿಯಾ ಬಯಲಾಗಿದೆ.

ಪ್ರತಿನಿಧಿ: ಒಂದೊಂದು ಡ್ರೈವರ್‌ಗಳು ವೆಂಟಿಲೇಟರ್ ಗಳೇ ಹಾಕಿರಲ್ವಲ್ಲ
ಚಾಲಕ: ಹೇ. ಇರ್ತಾವೆ
ಪ್ರತಿನಿಧಿ: ಸುಮಾರು ಅಂಬುಲೆನ್ಸ್ ಗೆ ಇರಲ್ಲ
ಚಾಲಕ: ಹಾ. ಹೌದು
ಪ್ರತಿನಿಧಿ: ಮೊನ್ನೆ ನಮ್ಮ ಬ್ರದರ್ ನಾ ಕರ್ಕೊಂಡು ಬಂದ್ವಿ. ಇರಲಿಲ್ಲ
ಚಾಲಕ: ವೆಂಟಿಲೇಟರ್ ಇರೋ ಗಾಡಿ ಕಾಸ್ಟ್ಲಿ ಅದು
ಪ್ರತಿನಿಧಿ: ಮೊನ್ನೆ ನಮ್ಮ ಬ್ರದರ್‍ನಾ ಕರ್ಕೊಂಡು ಬಂದಿದ್ವಿ. ವೆಂಟಿಲೇಟರ್ ಇರಲಿಲ್ಲ
ಚಾಲಕ: ಪೇಷೆಂಟ್ ಎಲ್ಲಿದಾರೆ
ಪ್ರತಿನಿಧಿ: ಮೊನ್ನೆ ಕರ್ಕೊಂಡು ಬಂದಿದ್ವಿ
ಚಾಲಕ: ಬೇಕಾದ್ರೆ ಹೇಳಿ ಇರ್ತಿವಿ. ವೆಂಟಿಲೇಟರ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
ಪ್ರತಿನಿಧಿ: ದುಡ್ಡೇನಾದ್ರೂ ಚಾರ್ಜ್ ಮಾಡ್ತೀರಾ
ಚಾಲಕ: ಹೌದು
ಪ್ರತಿನಿಧಿ: ಎಷ್ಟು?
ಚಾಲಕ: ಯಾವ ಆಸ್ಪತ್ರೆಗೆ ಹೋಗ್ತೀರಾ

ಅಂಬುಲೆನ್ಸ್‌ಗಳಲ್ಲಿ ಮುಖ್ಯವಾಗಿ ಎರಡು ಕ್ಯಾಟಗರಿ ಇರುತ್ತೆ. ಒಂದು ಬೇಸಿಕ್ ಲೈಫ್ ಸಪೋರ್ಟ್. ಮತ್ತೊಂದು ಅಡ್ವಾನ್ಸ್ ಲೈಫ್ ಸಪೊರ್ಟ್ ಅಂತ. ಅಡ್ವಾನ್ಸ್ ಲೈಫ್ ಸಪೊರ್ಟ್‍ನಲ್ಲಿ ವೆಂಟಿಲೇಟರ್ ಇರುತ್ತೆ. ಹೃದಯಘಾತ, ರಸ್ತೆ ಅಪಘಾತ ಹೀಗೆ ರೋಗಿಗಳು ತುಂಬಾ ಕ್ರಿಟಿಕಲ್ ಕಂಡಿಷನ್ ಇರುವ ಸಮಯದಲ್ಲಿ ಈ ಅಂಬುಲೆನ್ಸ್ ಬಳಸುತ್ತಾರೆ. ಬೇಸಿಕ್ ಲೈಫ್ ಸಪೋರ್ಟ್ ಮಶಿನ್, ವೆಂಟಿಲೇಟರ್ ಗಿಂತ ಕಡಿಮೆ ಗುಣಮಟ್ಟ ಇರುತ್ತೆ. ಲಘು ಹೃದಯಾಘಾತ ಹಾಗೂ ಸಾಮಾನ್ಯ ಸಂದರ್ಭಗಳಲ್ಲಿ ಇದರ ಉಪಯೋಗವಾಗುತ್ತೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೃದಯಾಘಾತ, ರಸ್ತೆ ಅಪಘಾತಗಳಾದ್ರೆ ವೆಂಟಿಲೇಟರ್ ಇರಲೇಬೇಕು. ಹೃದಯ ಬಡಿತ ಸ್ಲೋ ಮೂವಿಂಗ್ ಆದಾಗ ಹೃದಯವನ್ನು ಈ ವೆಂಟಿಲೇಟರ್ ಆ್ಯಕ್ಟಿವ್ ಮಾಡುತ್ತೆ. ಆದರೆ ಬೆಂಗಳೂರಿನಲ್ಲಿ ಇದರ ಸಂಖ್ಯೆ ಕೇವಲ 17 ಮಾತ್ರ ಇದೆ.

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಕೇವಲ 17 ವೆಂಟಿಲೇಟರ್ ಇರುವ ಅಂಬುಲೆನ್ಸ್ ಗಳಿರುವುದು ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ. ಏಕಕಾಲಕ್ಕೆ ವೆಂಟಿಲೇಟರ್ ಇರುವ ಅಂಬುಲೆನ್ಸ್ ಗಳೇ ಬೇಕು ಎಂಬ ಮೂರ್ನಾಲ್ಕು ದೂರುಗಳು ಬಂದರೆ, ತುರ್ತಾಗಿ ಚಿಕಿತ್ಸೆ ನೀಡಲಾಗದಂತಹ ಸ್ಥಿತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಇದೆ. ಈ ಸ್ಟೋರಿಯನ್ನ ನೋಡಿದ ಮೇಲೆನಾದ್ರೂ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಈ ಬಗ್ಗೆ ಗಮನ ಹರಿಸ್ತಾರಾ? ರೋಗಿಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ವೆಂಟಿಲೇಟರ್ ಅಂಬುಲೆನ್ಸ್ ಸೇವೆಯನ್ನು ಓದಗಿಸುತ್ತಾರೆ ಎಂಬುದನ್ನು ನೋಡಬೇಕು.

108 ಎಮರ್ಜೆನ್ಸಿ ತಂಡದ ಮುಖ್ಯಸ್ಥ ಡಾ. ಪ್ರಮೋದ್ ಈ ಬಗ್ಗೆ ಪ್ರತಿಕ್ರಿಯಿಸಿ, ತುರ್ತು ಆರೋಗ್ಯ ಚಿಕಿತ್ಸೆ ಸಂದರ್ಭದಲ್ಲಿ, ವೆಂಟಿಲೇಟರ್ ಇರೋ ಅಂಬುಲೆನ್ಸ್ ಗಳ ಸೇವೆ ತುಂಬಾ ಅವಶ್ಯಕತೆ ಇದೆ. ರೋಗಿಗೆ ಕ್ರಿಟಿಕಲ್ ಕಂಡಿಷನ್ ಇದ್ದಾಗ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುವಾಗ ವೆಂಟಿಲೇಟರ್ ಇರಲೇಬೇಕು. ಆದರೆ ನಮ್ಮ ಬೆಂಗಳೂರಿನಲ್ಲಿ ಇದರ ಸಂಖ್ಯೆ ಕಡಿಮೆ ಇದೆ. ವೆಂಟಿಲೇಟರ್ ಇರುವ ಅಂಬುಲೆನ್ಸ್ ಅನ್ನು ಕಳುಹಿಸುವಷ್ಟರಲ್ಲಿ ತಡವಾಗುತ್ತೆ. ಹೀಗಾಗಿ ರೋಗಿಗೆ ಸಮಸ್ಯೆಯಾಗುತ್ತೆ. ಆದರೂ ನಾವು ನಮ್ಮ ಶಕ್ತಿ ಮೀರಿ ಕಡಿಮೆ ಸಮಯದಲ್ಲಿ ಈ ಅಂಬುಲೆನ್ಸ್ ಅನ್ನು ಕಳುಹಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *