ಆನ್‌ಲೈನ್‌ ಟ್ರೇಡಿಂಗ್‌ ದೋಖಾ- 11.56 ಲಕ್ಷ ಕಳೆದುಕೊಂಡ ವ್ಯಕ್ತಿ

ತುಮಕೂರು: ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ (Online Trading Scam) ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ (Tumakuru) ವ್ಯಕ್ತಿಯೊಬ್ಬರು 11.56 ಲಕ್ಷ ರೂ. ಕಳೆದುಕೊಂಡಿದ್ದಾರೆ.‌

ವಿದ್ಯಾನಗರದ ವಿ.ಪುರುಷೋತ್ತಮ್ ಎಂಬವರು ಹಣ ಕಳೆದುಕೊಂಡವರು. ಅವರಿಗೆ ಟೆಲಿಗ್ರಾಮ್‌ನಲ್ಲಿ ಪ್ರಿಯಾ ಮೆಹತಾ ಎಂಬ ಹೆಸರಿನಿಂದ ವಂಚಕರು ಪರಿಚಯಿಸಿಕೊಂಡಿದ್ದಾರೆ. ಬಳಿಕ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ವೆಬ್‌ಸೈಟ್‌ ಒಂದರಲ್ಲಿ ನೋಂದಾಯಿಸಿಕೊಳ್ಳುವಂತೆ ವಂಚಕರು ತಿಳಿಸಿದ್ದಾರೆ. ಅದರಂತೆ ನೋಂದಣಿ ಮಾಡಿಕೊಂಡು ಒಂದು ಟ್ರೇಡಿಂಗ್ ಖಾತೆ ತೆರೆದಿದ್ದಾರೆ.

ಮೊದಲಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ದು, ಅವರ ಖಾತೆಗೆ ಮರಳಿ 13 ಸಾವಿರ ರೂ. ವಾಪಸ್ ಹಾಕಿದ್ದರು. ಇದೇ ರೀತಿ ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ಪುರುಷೋತ್ತಮ್ 2024ರ ನ.24ರಿಂದ ಡಿ.31ರ ವರೆಗೆ ಹಂತ ಹಂತವಾಗಿ 11,56,560 ರೂ. ವರ್ಗಾಯಿಸಿದ್ದಾರೆ. ಮತ್ತೆ 30 ಲಕ್ಷ ರೂ. ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಲಾಭ ಸಿಗಲಿದೆ ಎಂದು ಹೇಳಿದ್ದಾರೆ. ಇದಾದ ಬಳಿಕ ಟ್ರೇಡಿಂಗ್ ಖಾತೆಯಿಂದ ಹಣ ಪಡೆಯಲು ಪ್ರಯತ್ನಿಸಿದಾಗ ಖಾತೆ ಬ್ಲಾಕ್ ಆಗಿದೆ ಎಂದು ತೋರಿಸಿದೆ.

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆಗೆ ಒಳಗಾದ ವಿಷಯ ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ಅವರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.