ಇಂದಿನಿಂದ ಒಂದು ವಾರ ನಂದಿ ಬೆಟ್ಟದ ಬಾಗಿಲು ಬಂದ್

ಚಿಕ್ಕಬಳ್ಳಾಪುರ: ದೇಶದಲ್ಲಿ ಕೊರೊನಾ ವೈರಸ್‍ಗೆ ಎರಡನೇ ಬಲಿಯಾಗಿದ್ದು, ಕರುನಾಡಿನಲ್ಲೂ ಕೊರೊನಾ ವೈರಸ್ ಓರ್ವನನ್ನ ಬಲಿ ಪಡೆದಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಒಂದು ವಾರ ರಾಜ್ಯದಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಮಾಲ್, ಥಿಯೇಟರ್‌ಗಳು ಬಂದ್ ಆಗಲಿವೆ. ಅಂತೆಯೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮದ ಬಾಗಿಲು ಸಹ ಬಂದ್ ಆಗಿದೆ.

ಹೌದು..ಇಂದಿನಿಂದ ಒಂದು ವಾರ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇಂದಿನಿಂದಲೇ ನಂದಿಗಿರಿಧಾಮದ ಬಾಗಿಲು ಸಂಪೂರ್ಣ ಬಂದ್ ಆಗಿದೆ. ಅಂದಹಾಗೆ ವಿಕೇಂಡ್‍ನಲ್ಲಿ 6 ರಿಂದ 7 ಸಾವಿರ ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಭೇಟಿ ನೀಡುತ್ತಿದ್ದರು. ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ನಂದಿಗಿರಿಧಾಮಕ್ಕೆ ಬರುವವರ ಸಂಖ್ಯೆಯೂ ಜಾಸ್ತಿಯಾಗುವ ಸಾಧ್ಯತೆಯಿತ್ತು.

ಆದರೆ ಕೊರೊನಾ ಭೀತಿಯಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದೆ. ಹೀಗಾಗಿ ನಂದಿಗಿರಿಧಾಮಕ್ಕೆ ಬರೋ ಪ್ರವಾಸಿಗರು ಒಂದು ವಾರ ನಂದಿಬೆಟ್ಟದ ಕಡೆ ಬಾರದೆ ಇರುವುದು ಒಳಿತು. ಸಾಮಾನ್ಯವಾಗಿ ಬೆಂಗಳೂರಿಗೆ ಕೂಗಳತೆ ದೂರದ ನಂದಿ ಬೆಟ್ಟಕ್ಕೆ ವಿಕೇಂಡ್‍ನಲ್ಲಿ ಬೆಂಗಳೂರಿಗರು ಅದರಲ್ಲೂ ಟೆಕ್ಕಿಗಳು ಜಾಸ್ತಿ ಆಗಮಿಸುತ್ತಾರೆ.

ಇಂದು ಬೆಳಿಗ್ಗೆಯಿಂದಲೇ ಗೇಟ್ ಬಂದ್ ಮಾಡಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನ ಸಹ ನಿಯೋಜಿಸಲಾಗಿದೆ. ಹೀಗಾಗಿ ನಂದಿಬೆಟ್ಟದತ್ತ ಪ್ರವಾಸಿಗರ ಬರಬಾರದು ಅಂತ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಮನವಿ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಬಂದಿದ್ದ ಎಲ್ಲಾ ಪ್ರವಾಸಿಗರನ್ನ ವಾಪಸ್ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *