ಐಎಂಎ ಪ್ರಕರಣ: ಜೈಲಿನಿಂದ ಹೊರಬಂದವನಿಗೆ ರಾಜಮರ್ಯಾದೆ

ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಮಾಯಕರ ಹಣ ತಿಂದವನಿಗೆ ರಾಜಮರ್ಯಾದೆ ನೀಡಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ನಿರ್ದೇಶಕರಲ್ಲಿ ಒಬ್ಬನಾದ ಮುಜಾಹಿದ್ದೀನ್ ಜೈಲಿನಿಂದ ಹೊರಬಂದಿದ್ದು, ಆತನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಐಎಂಎ ಕೇಸಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಈಗ ಮುಜಾಹಿದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈತನನ್ನು ಬೆಂಬಲಿಗರು ಪಟಾಕಿ ಸಿಡಿಸಿ, ಹಾರ ಹಾಕಿ ಸ್ವಾಗತಿಸಿದ್ದಾರೆ. ಬೆಂಗಳೂರಿನ ಫ್ರೆಜರ್‍ಟೌನ್ ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದೇ ತಿಂಗಳ 11ರಂದು ಮುಜಾಹಿದ್ದೀನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿತ್ತು. ಮನ್ಸೂರ್ ಖಾನ್ ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಮುಜಾಯಿದ್ದೀನ್ ಮೇಲೆ ಎಸ್‍ಐಟಿ ರೇಡ್ ಮಾಡಿ ಅರೆಸ್ಟ್ ಮಾಡಿತ್ತು.

ಗ್ರಾಹಕರಿಗೆ ವಂಚಿಸಿದ್ದು ಹೇಗೆ?
ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

Comments

Leave a Reply

Your email address will not be published. Required fields are marked *