ಮಂಗಳೂರು: ಕೋಳಿ ಸಾಗಾಟದ ಲಾರಿ ಗುದ್ದಿ ಬೈಕ್ ಸವಾರರೊಬ್ಬರು ದಾರುಣವಾಗಿ ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.
ಮೃತ ದುರ್ದೈವಿ ಬೈಕ್ ಸವಾರನನ್ನು ಕರಿಮಣೇಲು ನಿವಾಸಿ ಉದಯ್ ಜೈನ್(40) ಎಂದು ಗುರುತಿಸಲಾಗಿದೆ. ಈ ಘಟನೆ ಬೆಳಗ್ಗಿನ ಜಾವ 7.30 ಕ್ಕೆ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಇಂದು ಬೆಳಗ್ಗೆ ಕೋಳಿ ಸಾಗಾಟದ ಲಾರಿ ಬೆಳ್ತಂಗಡಿಯಿಂದ ವೇಣೂರು ಕಡೆ ಚಲಿಸುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ತೆರಳಿ ನೇರವಾಗಿ ಬೈಕ್ ಗೆ ಗುದ್ದಿದೆ. ಈ ವೇಳೆ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಕೂಡ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಲಾರಿ ಅವರ ಮೇಲೆ ಹರಿದಿದೆ. ಘಟನೆಯಿಂದಾಗಿ ಬೈಕ್ ಸವಾರ ಉದಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಹಿಂಬದಿಯಲ್ಲಿ ಕುಳಿತಿದ್ದ ಉದಯ್ ಪುತ್ರಿಯರಿಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

ಕೋಳಿ ಸಾಗಾಟ ಮಾಡೋ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಈ ಅವಘಡ ಸಂಭವಿಸಿದೆ. ಲಾರಿ ಬರುತ್ತಿದ್ದ ಇನ್ನೊಂದು ಬದಿಯಲ್ಲಿ ಅಂದರೆ ರಸ್ತೆ ಮಧ್ಯದಲ್ಲೇ ಕೆಎಸ್‍ಆರ್ ಪಿ ವಾಹನ ನಿಂತಿದ್ದು, ಹೀಗಾಗಿ ಚಾಲಕ ಬೈಕ್ ಸವಾರನ್ನು ಗಮನಿಸದೇ ಇರುವುದು ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ. ಘಟನೆ ನಡೆದ ಕೂಡಲೇ ಸಾರ್ವಜನಿಕರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಈ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=Z5ikQOQ5fTw




Leave a Reply