ಕ್ರೈಂ ಲೋಕದ ಅಪರೂಪದ ಕೇಸ್: ಜೀವಾಣುಗಳಿಂದ ಆರೋಪಿಗಳು ಅರೆಸ್ಟ್

ಬೆಂಗಳೂರು: ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರು ನಾನಾ ತಂತ್ರಗಳನ್ನ ಅನುಸರಿಸುತ್ತಾರೆ. ಆದರೆ ಇದೇ ಮೊದಲಬಾರಿಗೆ ಕೈಯಲ್ಲಿರೋ ಜೀವಾಣುಗಳ ಸಹಾಯದಿಂದ ಮೂವರು ಕೊಲೆ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 4 ರಂದು ಜಯನಗರದ ಈಸ್ಟ್ ಎಂಡ್‍ನಲ್ಲಿದ್ದ 58 ವರ್ಷದ ಮಹಿಳೆ ಮಣಿ ಅವರ ಕೊಲೆ ಅವರ ಮನೆಯಲ್ಲೇ ನಡೆದಿತ್ತು. ಬೆಳಗ್ಗೆ ಎಂಟು ಘಂಟೆಗೆ ಮಣಿ ಅವರ ಮಗ ಶ್ರೀನಿವಾಸ್ ಎದ್ದು ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಹೊರಗಿನಿಂದ ಚಿಲಕ ಹಾಕಲಾಗಿತ್ತು. ನಂತ್ರ ಪರಿಚಾರಕನಿಗೆ ಕರೆ ಮಾಡಿ ಕರೆಸಿಕೊಂಡು ಚಿಲಕ ಓಪನ್ ಮಾಡಿ ನೋಡಿದಾಗ ಮಣಿಯವರ ಕೊಲೆಯಾಗಿರೋದು ಗೊತ್ತಾಗುತ್ತದೆ.

ತನಿಖೆ ಹೇಗೆ ನಡೆಯಿತು?
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ತಿಲಕನಗರ ಪೊಲೀಸರಿಗೆ ಆರೋಪಿಗಳನ್ನ ಹುಡುಕೋದು ಸವಾಲಿನ ಕೆಲಸವಾಗಿರುತ್ತೆ. ಕೊನೆಗೆ ಕಳ್ಳತನಕ್ಕೆ ಬಂದಿದ್ದ ಆರೋಪಿಗಳ ಫಿಂಗರ್ ಪ್ರಿಂಟ್ ಕಿಟಕಿ ಮೇಲೆ ಬಿದ್ದಿರುತ್ತೆ. ವಿಧಿ ವಿಜ್ಞಾನ ಪ್ರಯೋಗಾಲಯದ ನೆರವಿನಿಂದ ಕಳ್ಳರ ಫಿಂಗರ್ ಪ್ರಿಂಟ್ ಇದ್ದ ಜಾಗದಲ್ಲಿ ಜೀವಾಣುಗಳನ್ನು ಕಲೆಹಾಕಲಾಗುತ್ತದೆ. ಜೀವಾಣುಗಳನ್ನ ಮೈಕ್ರೊ ಸ್ಕೋಪಿಕಲ್ ಎಕ್ಸಾಮಿನೇಷನ್‍ಗೆ ಒಳಪಡಿಸಿದಾಗ ಪೊಲೀಸ್ರಿಗೆ ಒಂದು ಕ್ಲೂ ಸಿಗುತ್ತೆ. ಈ ತರಹದ ಜೀವಾಣುಗಳು ಚಿಂದಿ ಆಯೋರ ಬಳಿ ಹೆಚ್ಚಿಗೆ ಕಂಡುಬರೋದಾಗಿ ಗೊತ್ತಾಗುತ್ತೆ.

ಈ ವಿಚಾರ ತಿಳಿದಿದ್ದೆ ತಡ ಆ ಪ್ರದೇಶದಲ್ಲಿರುವ ಚಿಂದಿ ಆಯೋರನ್ನೆಲ್ಲಾ ಕರೆದುಕೊಂಡು ಬಂದು ವಿಚಾರಣೆ ಮಾಡಿದಾಗ ಕೊಲೆ ಆರೋಪಿಗಳು ಸಿಕ್ಕಿಬಿಳ್ತಾರೆ. ಗಣೇಶ್ ಅಲಿಯಾಸ್ ಚಪ್ಪರ್, ಚಿನ್ನರಾಜು ಅಲಿಯಾಸ್ ಮಾಡು, ಶಕ್ತಿವೇಲು ಅಲಿಯಾಸ್ ಬಾಸ್‍ನನ್ನ ಪೊಲೀಸ್ರು ಬಂಧಿಸ್ತಾರೆ.

ಅಂದು ನಡೆದಿದ್ದು ಏನು?
ಶಕ್ತಿವೇಲುವಿನ ಆಜ್ಞೆ ಮೇರೆಗೆ ಮದ್ಯಪಾನ ಮಾಡಿಕೊಂಡು ನಾನು ಮಣಿ ಅವರ ಮನೆಗೆ ನುಗ್ಗಿದ್ದೆ. ಮಗ ಶ್ರೀನಿವಾಸ್ ಕಿಶೋರ್ ಮಲಗಿದ್ದ ಕೋಣೆಗೆ ಹೊರಗಿನಿಂದ ಚಿಲಕ ಹಾಕಿ ನಾನು ಮಣಿಯವರು ಮಲಗಿದ್ದ ರೂಮ್‍ಗೆ ಎಂಟ್ರಿ ಕೊಟ್ಟಿದ್ದೆ. ಅವರ ಕತ್ತಿನಲ್ಲಿದ್ದ ಸರವನ್ನ ಕಟ್ ಮಾಡಿ ಎಳೆದ ನಂತ್ರ ಅವರ ಕೈಯಲ್ಲಿದ್ದ ಬಳೆಯನ್ನ ಬಿಚ್ಚಲು ಪ್ರಯತ್ನಿಸಿದಾಗ ಎಚ್ಚರಗೊಂಡ ಮಣಿಯವರು ಕೂಗಿಕೊಂಡಿದ್ದರು. ಕೂಡಲೇ ನಾನು ಕಬ್ಬಿಣದ ರಾಡ್‍ನಿಂದ ಅವರ ತಲೆಗೆ ಎರಡು ಬಾರಿ ಹೊಡೆದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದೆ ಎಂದು ಗಣೇಶ ಪೊಲೀಸ್ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಆರೋಪಿಗಳ ಬಂಧನದಿಂದ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, 9 ಮನೆಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ಅನಾಥರನ್ನಾಗಿ ಮಾಡಿತು ಕೊಲೆ
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಶ್ರೀನಿವಾಸ್ ಕುಟುಂಬ ನೆಲೆ ಕಂಡುಕೊಂಡಿತ್ತು. ತುಂಬಾ ಸುಸಂಸ್ಕೃತ ಕುಟುಂಬದ ಹಿನ್ನೆಲೆ ಹೊಂದಿದ್ದ ಮಣಿಯವರ ಪತಿ 2014ರಲ್ಲಿ ಕ್ಯಾನ್ಸರ್‍ನಿಂದ ಮೃತಪಟ್ಟಿದ್ದರು. ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಅಮೆರಿಕದಲ್ಲಿ ಸಿಕ್ಕಿದ್ದ ಕೆಲಸವನ್ನ ಶ್ರೀನಿವಾಸ್ ತಿರಸ್ಕರಿಸಿ ತಾಯಿಯ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ದುರ್ವಿಧಿ ಮಣಿಯವರನ್ನ ಕಿತ್ತುಕೊಂಡು ಶ್ರೀನಿವಾಸ್ ಅವರನ್ನು ಅನಾಥರನ್ನಾಗಿ ಮಾಡಿದೆ.

ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಆರೋಪಿಗಳು ಜೈಲು ಸೇರಿದ್ದಾರೆ. ಜೀವಾಣುಗಳ ಸಹಾಯದಿಂದಲೂ ಆರೋಪಿಗಳನ್ನ ಹಿಡಿಯಬಹುದು ಎಂದು ತಿಲಕನಗರ ಇನ್ಸ್ ಪೆಕ್ಟರ್ ತನ್ವೀರ್ ಮತ್ತು ತಂಡ ಈಗ ತೋರಿಸಿಕೊಟ್ಟಿದೆ.

Comments

Leave a Reply

Your email address will not be published. Required fields are marked *