ದಶಕದ ಸಂಭ್ರಮಕ್ಕೆ ಜೊತೆಯಾದ ‘ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ’

ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ ಹಾಗೂ ಸಾಧುಕೋಕಿಲ ಪ್ರಮುಖ ಭೂಮಿಕೆಯಲ್ಲಿದ್ದ ‘ಶ್ರಾವಣಿ ಸುಬ್ರಮಣ್ಯ’ (Shravani Subramanya) ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ದಶಕದ ಸಂಭ್ರಮದ ನೆನಪಿನಲ್ಲಿಯೇ “ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ” ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ಮಾಪಕ ಕೆ.ಎ.ಸುರೇಶ್.

27 ಡಿಸೆಂಬರ್ 2013 ರಲ್ಲಿ ತೆರೆಕಂಡಿದ್ದ ಶ್ರಾವಣಿ ಸುಬ್ರಮಣ್ಯ, ಸೂಪರ್ ಹಿಟ್ ಆಗುವ ಮೂಲಕ ಎಲ್ಲರಿಗೂ ಬ್ರೇಕ್ ಕೊಟ್ಟಿತ್ತು. ಗಣೇಶ್ – ಅಮೂಲ್ಯ ಜೋಡಿಯ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರಿಂದ ಸಿನಿಮಾ ಶತಕ ಪೂರೈಸುವಲ್ಲಿ ಯಶಸ್ವಿಯಾಯಿತು. ಇದೀಗ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಅಧಿಕೃತವಾಗಿ ಘೋಷಣೆಯಾಗಿದೆ. ಸದ್ಯ ಹರಿಬಿಟ್ಟಿರುವ ಕಲರ್ ಫುಲ್ ಪೋಸ್ಟರ್ ಸಿನಿಮಾ ಮೇಲೆ ಕೂತುಹಲ ಮಾಡುವಂತಿದೆ. ಶ್ರಾವಣಿ ಸುಬ್ರಮಣ್ಯ ಗೆದ್ದಿರುವುದರಿಂದ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಜೋಡಿ ಮೋಡಿ ಮಾಡಲಿದೆ ಎಂಬುದು ಪೋಸ್ಟರ್ ನೋಡಿದವರ ಅನಿಸಿಕೆ.

ಮಂಜು ಸ್ವರಾಜ್ ಅವರೇ ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆಗಾಗಿ ಆಡಿಷನ್ ಕರೆದಿದೆ ಚಿತ್ರತಂಡ. ಇದೊಂದು ಯೂತ್ ಫುಲ್ ಲವ್ ಕಮ್ ಫ್ಯಾಮಿಲಿ ಸ್ಟೋರಿ ಆಗಿರುವುದರಿಂದ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ಹುಡುಕಾಟ ಶುರುವಾಗಿದೆ. 20 ವರ್ಷದ ಆಸುಪಾಸು ಇದ್ದವರು ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಯಾಗಲು ಅರ್ಜಿ ಸಲ್ಲಿಸಬಹುದು.

 

ಎಲ್ಲಾ ಅಂದುಕೊಂಡಂತೆ ನಡೆದರೆ ಹೊಸ ವರ್ಷದಲ್ಲಿ ಹೊಸ ಶ್ರಾವಣಿ ಸುಬ್ರಮಣ್ಯ ಲವ್ ಕಹಾನಿ ಶುರುವಾಗಲಿದೆ. ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಕುರಿತು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.