ಮಹಿಳೆ ಕೈಯನ್ನು ಮರಕ್ಕೆ ಕಟ್ಟಿ ಹೊಡೆದ ಗಂಡ- ಮೂಖಪ್ರೇಕ್ಷಕರಾಗಿ ನಿಂತಿದ್ದ ಜನ

ಲಕ್ನೋ: ಮಹಿಳೆಯ ಕೈಯನ್ನು ಮರಕ್ಕೆ ಕಟ್ಟಿ ಆಕೆಯ ಗಂಡ ಮನಬಂದಂತೆ ಹೊಡೆಯುತ್ತಿದ್ದರೆ, ಪ್ರತಿ ಹೊಡೆತ ಅವಳ ಮೈ ಮೇಲೆ ಬಿದ್ದಾಗಲು ಅವಳು ನೋವಿನಿಂದ ಚೀರುತಿದ್ದಳು. ಅಮಾನವೀಯವಾಗಿ ಮಹಿಳೆಗೆ ಹೊಡೆಯುವುದನ್ನ ವೀಕ್ಷಿಸಲು ತುಂಬಾ ಕಷ್ಟವಾಗುತ್ತದೆ. ಆದ್ರೆ ಅಲ್ಲಿದ್ದ ನೂರಾರು ಜನ ಅದರಲ್ಲೂ ಹೆಚ್ಚಾಗಿ ಪುರುಷರು ನಗುತ್ತಾ ನೋಡುತ್ತಿದ್ದರು ಮತ್ತು ಯಾರು ಕೂಡ ಮಹಿಳೆಯ ಸಹಾಯಕ್ಕೆ ಬರಲಿಲ್ಲ.

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಇದೇ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಗೆ ಹೊಡೆಯಲು ಆ ಗ್ರಾಮದ ಪಂಚಾಯ್ತಿಯೇ ಆದೇಶ ನೀಡಿತ್ತು ಎಂದು ವರದಿಯಾಗಿದೆ. ಈ ಗ್ರಾಮ ರಾಷ್ಟ್ರರಾಜಧಾನಿ ದೆಹಲಿಯಿಂದ  60 ಕಿಲೋಮೀಟರ್ ದೂರದಲ್ಲಿದೆ.

ಗ್ರಾಮಸ್ಥರೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದು, ಕಳೆದ ವಾರದಿಂದ ವಿಡಿಯೋ ವೈರಲ್ ಆಗಿದೆ. ಈ ಕೃತ್ಯ ನಡೆದ ಸಂದರ್ಭದಲ್ಲಿ ನೂರಾರು ಜನರು ಆ ಭಾಗದಲ್ಲಿ ಸುತ್ತುವರೆದಿದ್ದರು ಮತ್ತು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ಆ ಮಹಿಳೆಗೆ ಹೊಡೆಯುವುದನ್ನು ನೋಡುತ್ತಾ ನಿಂತಿದ್ದರು. ಈ ಹೀನ ಕೃತ್ಯವನ್ನ ನೋಡುತ್ತಿದ್ದರೂ ಆ ಮಹಿಳೆಯ ರಕ್ಷಣೆಗೆ ಯಾರೂ ಬರಲಿಲ್ಲ.

ಸೈಕಲ್ ಟ್ಯೂಬ್‍ನಿಂದ ಮಹಿಳೆಗೆ ಆಕೆಯ ಪತಿ ಈ ಶಿಕ್ಷೆಯನ್ನು ನೀಡುತ್ತಿದ್ದ. ಅಂತ್ಯದಲ್ಲಿ ಆ ಮಹಿಳೆ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಬುಧವಾರದಂದು ದೂರು ದಾಖಲಾದ ನಂತರ ಮಹಿಳೆಯ ಗಂಡನ ಸೇರಿದಂತೆ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಗ್ಗೆ ಗುರುವಾರದಂದು ನಮಗೆ ಮಾಹಿತಿ ತಿಳಿದುಬಂದಿದೆ. ಆ ಮಹಿಳೆಯನ್ನು ಕರೆಸಿ ಮಾತನಾಡಿ ನಂತರ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆಯ ಪತಿ ಮತ್ತು ಪಂಚಾಯ್ತಿಯ ಮುಖ್ಯಸ್ಥರು ಹಾಗು ಅವರ ಮಗನನ್ನು ಬಂಧಿಸಲಾಗಿದೆ. 20 ರಿಂದ 25 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *