ಮೋದಿ ಕಾರ್ಯಕ್ರಮದಲ್ಲಿ ಬಿಹಾರ ಸರ್ಕಾರ ಬ್ಯುಸಿ – ನಿತೀಶ್ ವಿರುದ್ಧ ಯೋಧನ ಸಂಬಂಧಿ ಕಿಡಿ

ಪಾಟ್ನಾ: ಹುತಾತ್ಮ ಯೋಧರೊಬ್ಬರಿಗೆ ಬಿಹಾರದ ಸರ್ಕಾರ ಗೌರವ ಸಲ್ಲಿಸದೇ ನಿಷ್ಕಾಳಜಿ ಮೆರೆದಿದ್ದಾರೆ ಎಂದು ಯೋಧನ ಸಂಬಂಧಿಕರು ಕಿಡಿಕಾರಿದ್ದಾರೆ.

ಬಿಹಾರ ಮೂಲದ ಸಿಆರ್‌ಪಿಎಫ್ ಇನ್ಸ್ ಪೆಕ್ಟರ್ ಪಿಂಟು ಕುಮಾರ್ ಸಿಂಗ್ ಅವರು, ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಹುತಾತ್ಮರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಇಂದು ಪಾಟ್ನಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು.

ರಾಜ್ಯದ ಯೋಧನೊಬ್ಬರ ಪಾರ್ಥಿವ ಶರೀರವನ್ನು ಸ್ವೀಕರಿಸಿ, ಅಂತಿಮ ನಮನ ಸಲ್ಲಿಸಲು ಸಿಎಂ ನಿತೀಶ್ ಕುಮಾರ್ ಬರಲಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹುತಾತ್ಮ ಯೋಧ ಪಿಂಟು ಕುಮಾರ್ ಸಿಂಗ್ ಅವರ ಸಂಬಂಧಿ ಸಂಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಕಲ್ಪ ಯಾತ್ರೆ ಬೃಹತ್ ಸಮಾವೇಶ ನಡೆದಿದೆ. ಹೀಗಾಗಿ ಎನ್‍ಡಿಎ ಮೈತ್ರಿ ಕೂಟದ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಆದರೆ ಅಲ್ಲಿಯೇ ಇರುವ ಜೈ ಪ್ರಕಾಶ್ ನಾರಾಯಣ ವಿಮಾನ ನಿಲ್ದಾಣಕ್ಕೆ ಯಾರೊಬ್ಬರೂ ಬಂದು ಯೋಧನ ಪಾರ್ಥಿವ ಶರೀರ ಸ್ವೀಕರಿಸಿ, ಗೌರವಿಸಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಪಿಂಟು ಕುಮಾರ್ ಸಿಂಗ್ ಅವರ ಪಾರ್ಥಿವ ಶರೀರ ಸ್ವೀಕರಿಸಲು ಪಾಟ್ನಾ ವಿಮಾನ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಕುಮಾರ್ ರವಿ, ಹಿರಿಯ ಪೊಲೀಸ್ ಅಧಿಕಾರಿ ಗರಿಮಾ ಮಲ್ಲಿಕ್, ಸಿಆರ್‍ಪಿಎಫ್‍ನ ಅಧಿಕಾರಿಗಳು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಜಾ, ಲೋಕ ಜನಶಕ್ತಿ ಪಕ್ಷದ ಚೌದ್ರಿ ಮೆಹಬೂಬ್ ಅಲಿ ಕೈಸರ್ ಆಗಮಿಸಿದ್ದರು. ಈ ವೇಳೆ ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.

ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲು ಬಂದಿದ್ದೇನೆ ಎಂದು ಬಿಹಾರ ಕಾಂಗ್ರೆಸ್‍ನ ಅಧ್ಯಕ್ಷ ಮದನ್ ಮೋಹನ್ ಹೇಳಿದರು.

ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿ ನೇತೃತ್ವದ ಸಂಕಲ್ಪ ಯಾತ್ರೆಯಲ್ಲಿ ನಿರತರಾಗಿದ್ದರೆ. ಹೀಗಾಗಿ ಕನಿಷ್ಠ ಉಪ ಮುಖ್ಯಮಂತ್ರಿ ಸುನಿಲ್ ಕುಮಾರ್ ಮೋದಿ ಅವರನ್ನು ಕಳುಹಿಸಬಹುದಿತ್ತು ಎಂದು ಎನ್‍ಡಿಎ ಮೈತ್ರಿಯ ಜೆಎಲ್ ಪಕ್ಷದ ಮುಖಂಡ ಕೈಸರ್ ಅಸಮಾಧಾನ ಹೊರಹಾಕಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಬಿಹಾರ ಮೂಲದ ಇಬ್ಬರು ಸಿಆರ್‌ಪಿಎಫ್ ಯೋಧರ ಪಾರ್ಥಿವ ಶರೀರ ಸ್ವೀಕರಿಸಲು ಸಿಎಂ ನಿತಿಶ್ ಕುಮಾರ್ ಅವರು ಫೆಬ್ರವರಿ 16ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಜೊತೆಗೆ ಉಪ ಮುಖ್ಯಮಂತ್ರಿ ಸುನಿಲ್ ಕುಮಾರ್ ಮೋದಿ, ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹಾಜರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *