ಕಾರ್ಮಿಕರ ದಿನಾಚರಣೆಯಂದು ಚಿಕ್ಕಬಳ್ಳಾಪುರ ಡಿಸಿಯಿಂದ ಕಲ್ಯಾಣಿ ಸ್ವಚ್ಛತೆ

ಚಿಕ್ಕಬಳ್ಳಾಪುರ: ಕಾರ್ಮಿಕರ ದಿನಾಚರಣೆಯಂದು ಪಾಳುಬಿದ್ದು ಕಸದ ತೊಟ್ಟಿಯಾಗಿದ್ದ ಪುರಾತನ ಕಲ್ಯಾಣಿಯನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜೊತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸ್ವಚ್ಛತೆ ಮಾಡಿದ್ದಾರೆ.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ನಗರದ ಬಸಪ್ಪ ಛತ್ರದಲ್ಲಿ ಡಂಪಿಂಗ್ ಯಾರ್ಡ್‍ಗೆ ಮೂಲೆಗುಂಪಾಗಿದ್ದ ಕಲ್ಯಾಣಿಯ ಸ್ವಚ್ಛತಾ ಕಾರ್ಯ ಮಾಡಿದರು.

ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಂಗಮಂದಿರದ ಬಳಿಯೇ ಇರುವ ಈ ಪುರಾತನ ಕಲ್ಯಾಣಿ ಕಸದಿಂದ ತುಂಬಿ ತುಳುಕಿ, ಮುಳ್ಳಿನ ಗಿಡಗಂಟೆಗಳಿಂದ ಮುಚ್ಚಿ ಹೋಗಿತ್ತು. ಈ ಹಿಂದೆ ರಂಗಮಂದಿರ ಕಾಮಗಾರಿ ಪರಿಶೀಲನೆ ವೇಳೆ ಪಾಳುಬಿದ್ದಿದ್ದ ಕಲ್ಯಾಣಿ ಕಂಡಿದ್ದ ಜಿಲ್ಲಾಧಿಕಾರಿ ಕಲ್ಯಾಣಿಗೆ ಮರುಜೀವ ಕೊಡುವ ಸಂಕಲ್ಪ ಮಾಡಿದ್ದರು. ಹೀಗಾಗಿ ಕಾರ್ಮಿಕ ದಿನಾಚರಣೆಯ ದಿನವೇ ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ, ಹಾಗೂ ಪತ್ರಕರ್ತರ ಜೊತೆಗೂಡಿ ಜಿಲ್ಲಾಧಿಕಾರಿ ಕಲ್ಯಾಣಿ ಸ್ವಚ್ಛತಾ ಕಾರ್ಯ ನಡೆಸಿದರು. ಸತತ 3 ಗಂಟೆಗೂ ಹೆಚ್ಚು ಕಲ್ಯಾಣಿಯಲ್ಲಿನ ಗಿಡಗಂಟೆಗಳು, ಕಲ್ಲು-ಮಣ್ಣು ಎತ್ತಿ ಹಾಕಿ ಸ್ವಚ್ಛತಾ ಕಾರ್ಯ ನಡೆಯಿತು.

ಜಿಲ್ಲೆಯ ಎಲ್ಲಾ ಕಲ್ಯಾಣಿ-ಪುಷ್ಕರಣಿಗಳನ್ನ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಂತ ಹಂತವಾಗಿ ಎಲ್ಲಾ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ಮಾಡುವುದಾಗಿ ಈ ವೇಳೆ ಅನಿರುದ್ಧ್ ಶ್ರವಣ್ ತಿಳಿಸಿದರು.

Comments

Leave a Reply

Your email address will not be published. Required fields are marked *