ರಾಹುಲ್ ಬಾರದ ಕೃಷ್ಣಮಠಕ್ಕೆ ಮೋದಿ ಭೇಟಿ – ಮೇ 1 ರಂದು ಉಡುಪಿಗೆ ಪ್ರಧಾನಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮೇ 1 ರಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ನಂತರ ಮೊದಲ ಬಾರಿಗೆ ಉಡುಪಿಗೆ ಬರುತ್ತಿರುವ ಮೋದಿ, ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಪ್ರಾಣ ದೇವರ ದರ್ಶನಗೈಯ್ಯಲಿದ್ದಾರೆ.

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪಲಿಮಾರುಶ್ರೀ, ಮತ್ತು ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಮಾತುಕತೆ ಮಾಡಲಿದ್ದಾರೆ. ನಂತರ ಎಂಜಿಎಂ ಕಾಲೇಜಿನ ಮೈದಾನದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 20 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಮತ್ತು ಮತದಾರರನ್ನು ಸೆಳೆಯುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ.

ಉಡುಪಿಯಲ್ಲಿ ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾಹಿತಿ ನೀಡಿದ್ದಾರೆ. ತಿಂಗಳ ಹಿಂದೆ ಜನಾಶೀರ್ವಾದ ಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದ್ರೂ ಮಠದಿಂದ ದೂರವಿದ್ದರು. ಕಾಪು ತಾಲೂಕಿಗೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ, ಕೃಷ್ಣಮಠಕ್ಕೆ ಬಂದಿರಲಿಲ್ಲ. ರಾಹುಲ್ ಭೇಟಿಯನ್ನು ಸಿಎಂ ಸಿದ್ದರಾಮಯ್ಯ ತಪ್ಪಿಸಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಠಕ್ಕೆ ಈ ಹಿಂದೆಯೇ ಬಂದಿದ್ದಾರೆ. ಈ ಬಾರಿ ಮೋದಿ ಮಠಕ್ಕೆ ಭೇಟಿ ನೀಡಿ ಗೆಲುವಿನ ಚುನಾವಣಾ ಪ್ರಚಾರಕ್ಕೆ ಇಲ್ಲಿಂದಲೇ ಚಾಲನೆ ಕೊಡಲಿದ್ದಾರೆ ಎಂದರು.

 

ಮೊಗವೀರ ಮುಖಂಡ ಯಶ್ ಪಾಲ್ ಸುವರ್ಣ ಮಾತನಾಡಿ, ಈ ಬಾರಿ ಧರ್ಮದ ಮತ್ತು ಅಧರ್ಮದ ನಡುವಿನ ಯುದ್ಧ. ನಾವು ಧರ್ಮದ ಪರವಾಗಿದ್ದೇವೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧರ್ಮದ ಪರವಾಗಿದ್ದಾರೆ. ಉಡುಪಿಗೆ ಆರು ಬಾರಿ ಬಂದರೂ ಮಠಕ್ಕೆ ಬಾರದ ಸಿದ್ದರಾಮಯ್ಯ ನೇತೃತ್ವದ ಪಕ್ಷಕ್ಕೆ ರಾಜ್ಯದಲ್ಲೇ ಗೆಲುವು ಸಿಗುವುದಿಲ್ಲ ಎಂದರು.

ಈ ಮೂಲಕ ಕಾಂಗ್ರೆಸ್ ಗೆ ಟಾಂಗ್ ಕೊಡಲು ಬಿಜೆಪಿ ಸಿದ್ಧತೆ ಮಾಡಿದೆ. ಮಠದ ಭಕ್ತರ, ಕರಾವಳಿಯ ಮತದಾರರ ಸೆಳೆಯಲು ಬಿಜೆಪಿ ಪ್ಲಾನ್ ರೂಪಿಸಿದೆ. ತಿಂಗಳ ಹಿಂದೆ ಕೃಷ್ಣಮಠಕ್ಕೆ ಅಮಿತ್ ಶಾ ಬಂದಿದ್ದರು. ಸಿದ್ದರಾಮಯ್ಯ, ರಾಹುಲ್ ಗಾಂಧಿ ಉಡುಪಿಗೆ ಬಂದಿದ್ದರೂ ಕೃಷ್ಣಮಠಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಮಠ ಭೇಟಿ ಬಿಜೆಪಿಗೆ ಪ್ಲಸ್ ಆಗಬಹುದು ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

Comments

Leave a Reply

Your email address will not be published. Required fields are marked *