ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

ಬೆಂಗಳೂರು: ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಓಮಿಕ್ರಾನ್ ಸೋಂಕಿತ ಅಭಯವನ್ನು ನೀಡಿದ್ದಾರೆ.

ಓಮಿಕ್ರಾನ್ ಪರಿಣಾಮದ ಕುರಿತು ‘ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಸೋಂಕಿತ, ಸೋಂಕು ಬಂದಾಗಿನಿಂದ ಈವರೆಗೂ ನನಗೆ ಯಾವುದೇ ಸಮಸ್ಯೆ ಆಗಿಲ್ಲ. ಆ ಬಗ್ಗೆ ಆತಂಕವೂ ಇಲ್ಲ. ಓಮಿಕ್ರಾನ್ ತಗುಲಿದಾಗ ಆರಂಭದಲ್ಲಿ ಮೈ-ಕೈ ನೋವು ಕಾಣಿಸಿಕೊಂಡಿತ್ತು. ಈ ಲಕ್ಷಣ ಹೊರತುಪಡಿಸಿದರೇ ಬೇರೆ ಯಾವುದೇ ಸಮಸ್ಯೆ ನನಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌: ದಕ್ಷಿಣ ಆಫ್ರಿಕಾದಿಂದ ಆಗಮಿಸಿ ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಪ್ರಯಾಣಿಕರು ಪತ್ತೆ

ವೈರಸ್ ಹೇಗೆ ಬಂತು ಅಂತ ನನಗೆ ಗೊತ್ತಿಲ್ಲ. ನವೆಂಬರ್ 20ರಂದು ವೈದ್ಯರ ಸಮ್ಮೇಳನವೊಂದರಲ್ಲಿ ಭಾಗಿಯಾಗಿದ್ದೆ. ಆ ಬಳಿಕ ದೇಹದಲ್ಲಿ ಸ್ವಲ್ಪ ಏರುಪೇರು ಆಯಿತು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ಹೀಗಾಗಿ ಕೋವಿಡ್ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ಓಮಿಕ್ರಾನ್ ಇರುವುದು ದೃಢಪಟ್ಟಿತ್ತು. ವೈದ್ಯರು ನಿತ್ಯ ನನ್ನ ಮೇಲೆ ನಿಗಾ ವಹಿಸಿದ್ದಾರೆ. ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇವಲ 17,000 ಜನಸಂಖ್ಯೆ ಇರುವ ಕುಕ್‌ ಐಲ್ಯಾಂಡ್‌ ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ!

ಓಮಿಕ್ರಾನ್ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಗಂಭೀರ ಸ್ವರೂಪದ ಸೋಂಕು ಇದಲ್ಲ. ಇದರಿಂದ ಆರೋಗ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ ಓಮಿಕ್ರಾನ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ವೈದ್ಯರು ಮತ್ತು ಸರ್ಕಾರ ನೀಡುವ ಸಲಹೆ, ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಲಹೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *