ಸಿದ್ದರಾಮಯ್ಯ ನೇತೃತ್ವದಲ್ಲಿ ಹಳೆ ಮೈಸೂರು ‘ಕೈ’ ಮುಖಂಡರ ಸಭೆ: ಏನೆಲ್ಲ ಚರ್ಚೆ ಆಯ್ತು?

ಬೆಂಗಳೂರು: ಮಾಜಿ ಸಿಎಂ, ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಹಳೆ ಮೈಸೂರು ಪ್ರಾಂತ್ಯದ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಯಿತು.

ಕೆಪಿಸಿಸಿ ಕಚೇರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಮುಖವಾಗಿ ಜೆಡಿಎಸ್ ಜೊತೆಗಿನ ಮೈತ್ರಿ ಹಾಗೂ ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಚರ್ಚೆ ನಡೆಸಲಾಗಿದೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎ.ಮಂಜು, ಚಲುವರಾಯಸ್ವಾಮಿ, ಮಾಜಿ ಶಾಸಕರಾದ ನರೇಂದ್ರಸ್ವಾಮಿ, ಬಾಲಕೃಷ್ಣ, ಮಾಜಿ ಸಂಸದ ವಿಜಯ್ ಶಂಕರ್ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದರು.

ಹಾಸನ, ಮಂಡ್ಯಕ್ಕಾಗಿ ಪಟ್ಟು: ಸಭೆಯಲ್ಲಿ ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಬಗ್ಗೆ ಪ್ರಮುಖ ಚರ್ಚೆ ನಡೆದಿದ್ದು, ಒಂದೊಮ್ಮೆ ಮೈತ್ರಿ ಆದರೆ ಹಾಸನ ಅಥವಾ ಮಂಡ್ಯ ಎರಡರಲ್ಲಿ ಒಂದು ಕ್ಷೇತ್ರವನ್ನ ಕಾಂಗ್ರೆಸ್ ಕೇಳಲೇಬೇಕು ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹಾಸನ ಕ್ಷೇತ್ರವನ್ನು ಬಿಟ್ಟು ಕೊಡುವುದಾದರೆ ಹಾಲಿ ಸಂಸದರಾದ ಎಚ್‍ಡಿ ದೇವೇಗೌಡ ಅವರೇ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆಯೂ ಒತ್ತಡ ಹಾಕಲು ಮುಖಂಡರು ಆಗ್ರಹಿಸಿದ್ದಾರೆ ಎನ್ನಲಾಗಿದ್ದು, ಎಚ್‍ಡಿಡಿ ಸ್ಪರ್ಧೆ ಮಾಡಿದರೆ ಮಾತ್ರ ಮೈತ್ರಿಗಾಗಿ ಕಾರ್ಯನಿರ್ವಹಿಸುತ್ತೇವೆ ಪ್ರಜ್ವಲ್ ಅಭ್ಯರ್ಥಿ ಆದರೆ ಹಾಸನದಲ್ಲಿ ಮೈತ್ರಿಯೇ ಬೇಡ. ಒಂದೊಮ್ಮೆ ಮುಂದುವರಿದರೆ ಹಾಸನ ಜಿಲ್ಲಾ ಕಾಂಗ್ರೆಸ್ ನಿಂದಲೇ ಅಭ್ಯರ್ಥಿ ಸ್ಪರ್ಧೆ ನಡೆಯುತ್ತದೆ ಎಂಬ ಎಚ್ಚರಿಕೆಯನ್ನು ನಾಯಕರಿಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಮಂಡ್ಯದಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲು ಕಾಂಗ್ರೆಸ್ ನಾಯಕರ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಮೈತ್ರಿ ಏರ್ಪಟ್ಟರೆ ಮಂಡ್ಯವನ್ನ ಜೆಡಿಎಸ್‍ಗೆ ಬಿಟ್ಟು ಕೊಡಲೇ ಬೇಕು. ಆದ್ದರಿಂದ ಮೈತ್ರಿ ಮಾತುಕತೆ ನಡೆಯುವವರೆಗೂ ಕಾದು ನೋಡಿ ಅಭ್ಯರ್ಥಿ ಬಗ್ಗೆ ಯೋಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸುಮಲತಾ ಅಂಬರೀಶ್ ಅಭ್ಯರ್ಥಿ: ಒಂದೊಮ್ಮೆ ಮೈತ್ರಿಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೇಳಿದರೆ ಕಾಂಗ್ರೆಸ್ ನಿಂದ ಅವರನ್ನು ಸ್ಪರ್ಧೆಗೆ ಕೇಳುವುದು ಬೇಡ ಎಂಬ ಬಗ್ಗೆಯೂ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅವರು ಅಭ್ಯರ್ಥಿ ಆದರೆ ಮುಂದೇ ತೀರ್ಮಾನ ಮಾಡೋಣ. ಮೈತ್ರಿ ಆದರೆ ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಮುನ್ನವೇ ಕೇಳುವುದು ಬೇಡ ಎಂಬ ಗಂಭೀರ ಚರ್ಚೆ ನಡೆದಿದ್ದು, ಅವರ ಸ್ಪರ್ಧೆ ಬಗ್ಗೆಯೂ ಸಾಕಷ್ಟು ಸುದ್ದಿಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರಕ್ಕೆ ಸಭೆಯಲ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *