100 ವರ್ಷ ಹಳೆಯ ದೇವಾಲಯ ಧ್ವಂಸ – ಹಳೆ ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ

ನವದೆಹಲಿ: ಹಳೆ ದೆಹಲಿ ಭಾಗದ ಚಾಂದಿನಿ ಚೌಕ್ ಹೌಜ್ ಖಾಜಿ ಪ್ರದೇಶದಲ್ಲಿದ್ದ 100 ವರ್ಷ ಹಳೆಯ ದುರ್ಗಾ ದೇವಿಯ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿದೆ. ದೇವಾಲಯ ಧ್ವಂಸಗೊಂಡ ಬಳಿಕ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌಜ್ ಖಾಜಿ ಪ್ರದೇಶದಲ್ಲಿ ಪಾರ್ಕಿಂಗ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತಿತ್ತು. ಈ ಹಿನ್ನೆಲೆಯಲ್ಲಿ ಒಂದು ಗುಂಪು ಸ್ಥಳದಲ್ಲಿದ್ದ ದೇವಸ್ಥಾನವನ್ನು ಸಂಪೂರ್ಣ ಧ್ವಂಸ ಮಾಡಿದೆ. ಇದರಿಂದ ಇನ್ನೊಂದು ಗುಂಪಿನ ಜನರು ರೊಚ್ಚಿಗೆದ್ದಿದ್ದು, ಎರಡು ಗುಂಪಿನ ನಡುವೆ ಘರ್ಷಣೆ ನಡೆಯಲು ಕಾರಣವಾಗಿದೆ.

ಈ ಸಂಬಂಧ ಪೊಲೀಸ್ ಉಪ ಆಯುಕ್ತರಾದ ಮಂದೀಪ್ ಸಿಂಗ್ ರಾಂಧವ ಅವರು ಟ್ವೀಟ್ ಮಾಡಿ, ಸ್ಥಳದಲ್ಲಿ ಶಾಂತಿ ಕಾಪಾಡಲು, ಈ ಗಲಾಟೆಯನ್ನು ಹತೋಟಿಗೆ ತರಲು ಸ್ಥಳೀಯರು ಪೊಲೀಸರಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

“ಹೌಜ್ ಖಾಜಿಯಲ್ಲಿ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಕೆಲವು ವಾಗ್ವಾದ ಮತ್ತು ಗಲಾಟೆ ನಡೆದ ನಂತರ, ವಿವಿಧ ಸಮುದಾಯಗಳ ಎರಡು ಗುಂಪುಗಳ ನಡುವೆ ಗಲಾಟೆ ಆಗಿ ಉದ್ವಿಗ್ನ ಪರಿಸ್ಥಿತಿ ಉಂಟುಮಾಡಿದೆ. ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ ಮತ್ತು ಭಾವನೆಗಳನ್ನು ಸಮಾಧಾನಪಡಿಸಿ ಸೌಹಾರ್ದತೆಯನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ಥಳದಲ್ಲಿ ಶಾಂತಿ ಸ್ಥಾಪಿಸಲು ಸಹಾಯ ಮಾಡಿ” ಎಂದು ಡಿಸಿಪಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಗಲಾಟೆ ಸಂಬಂಧ ಒಂದು ವಿಡಿಯೋ ಹರಿದಾಡುತ್ತಿದೆ. ಪಾರ್ಕಿಂಗ್ ವಿಚಾರಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಹಾಗೂ ಒಂದು ಗುಂಪು ನಡುವೆ ಜಗಳ ನಡೆದು, ಬಳಿಕ ಅದು ತಾರಕ್ಕಕ್ಕೇರಿ ಗಲಾಟೆ ನಡೆದು ವ್ಯಕ್ತಿಯನ್ನು ಗುಂಪಿನಲ್ಲಿದ್ದ ಮಂದಿ ಥಳಿಸಿದ್ದಾರೆ. ಬಳಿಕ ಗಲಾಟೆ ಜೋರಾಗಿ ಹಲ್ಲೆಗೊಳಗಾದ ವ್ಯಕ್ತಿಯ ಕಡೆಯವರು ಹಲ್ಲೆ ನಡೆಸಿದ ಗುಂಪಿನ ಜೊತೆ ಹೊಡೆದಾಟ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಗಲಾಟೆ ನಡೆದಿದ್ದು, ಇದಾದ ಬಳಿಕ ಗುಂಪೊಂದು ಸ್ಥಳದಲ್ಲಿದ್ದ ದೇವಾಲಯವನ್ನು ಧ್ವಂಸಗೊಳಿಸಿದೆ. ಪರಿಣಾಮ ಎರಡು ಗುಂಪಿನ ನಡುವೆ ನಡೆದ ಗಲಾಟೆ ಈಗ ಎರಡು ಕೋಮಿನ ನಡುವೆ ಬಿರುಕು ಉಂಟುಮಾಡಿದೆ.

ಈ ಗಲಾಟೆ ದೊಡ್ಡದಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಘಟನೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಹೌಜ್ ಖಾಜಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *