ಜಂಟಿ ಅಧಿಕಾರಿಗಳ ದಾಳಿ – ಶುಚಿ, ರುಚಿ ಇಲ್ಲದ ಹೋಟೆಲ್‌ಗಳಿಗೆ ನೋಟಿಸ್

ಬಾಗಲಕೋಟೆ: ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನಗರಸಭೆ ಅಧಿಕಾರಿಗಳು ಶುಚಿ, ರುಚಿ ಕಾಪಾಡದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಶುದ್ಧ ನೀರು ಕೊಡದೆ ಇರುವುದು, ತಿಂಡಿ, ತಿನಿಸುಗಳಲ್ಲಿ ಅತಿಯಾದ ಬಣ್ಣ, ಟೇಸ್ಟಿಂಗ್ ಸಾಲ್ಟ್ ಬಳಕೆ, ಸ್ವಚ್ಛತೆಗೆ ಆದ್ಯತೆ ನೀಡದ ಬಾಗಲಕೋಟೆ ನಗರದ ವಿವಿಧ ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆ, ನಗರಸಭೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಜಂಟಿ ದಾಳಿ ನಡೆಸಿದರು.

ನಗರದ ಹತ್ತಕ್ಕೂ ಹೆಚ್ಚು ಹೋಟೆಲ್‌, ಬೇಕರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶುಚಿ, ರುಚಿ ಕಾಪಾಡದ ನಾಲ್ಕು ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅತಿಯಾದ ಬಣ್ಣ ಬಳಕೆ ಮಾಡಿದ್ದ ಆಹಾರ ಪದಾರ್ಥ ವಶಪಡಿಸಿಕೊಂಡ ಅಧಿಕಾರಿಗಳು, ಕರಿದ ಎಣ್ಣೆ ಮರುಬಳಕೆ ಮಾಡಿದಲ್ಲಿ ಹೋಟೆಲ್‌ ಮುಚ್ಚಿಸುವ ಎಚ್ಚರಿಕೆ ನೀಡಿದ್ದಾರೆ.

ನೋಟಿಸ್ ನೀಡಿರುವ ಹೋಟೆಲ್‌ಗಳ ವಿರುದ್ಧ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ತೀರ್ಮಾಸಿದ್ದಾರೆ.

Comments

Leave a Reply

Your email address will not be published. Required fields are marked *