ಯಾದಗಿರಿ: ಸಿಎಂ ಬರ್ತಾರೆ ಅಂತ ರಾತ್ರೋರಾತ್ರಿ ರಸ್ತೆಗೆ ಟಾರು

ಯಾದಗಿರಿ: ಜಿಲ್ಲೆಯ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿರೋ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿ ವರ್ಗ ರಾತ್ರೋರಾತ್ರಿ ರಸ್ತೆಗೆ ಟಾರ್ ಹಾಕಿಸಿದ್ದಾರೆ.

ಕಳೆದ 2-3 ವರ್ಷಗಳಿಂದ ತಗ್ಗು ಗುಂಡಿಗಳಿಂದ ಕೂಡಿದ ಟಾರ್ ಕಾಣದ ರಸ್ತೆಗಳೀಗ ಥಳಥಳ ಫಳಫಳ ಹೊಳೆಯುವಂತೆ ಮಾಡಿದ್ದಾರೆ. ಗ್ರಾಮೀಣ ಭಾಗದ ಮತ್ತು ನಗರದ ಇತರೆ ರಸ್ತೆಗಳು ಹಾಳಾದರೂ ಹೊರಳಿ ನೋಡದ ಅಧಿಕಾರಿಗಳು, ಸಿಎಂ ಮೆಚ್ಚಿಸಲು ಮಾಡಿದ ಈ ಕ್ರಮ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಯಾದಗಿರಿ ಜಿಲ್ಲೆಗೆ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣವಾಗಿ 6 ತಿಂಗಳಾಯ್ತು. ಎರಡು ಮೂರು ಬಾರಿ ಟೇಪ್ ಕತ್ತರಿಸಲು ಸಮಯ ನಿಗದಿ ಮಾಡಿ ಮುಂದಕ್ಕೆ ಹಾಕಿದ್ರು. ಇಂದು ಸಿದ್ದರಾಮಯ್ಯನವರು ಸಮಯ ಕೊಟ್ರು. ಅದಕ್ಕೆ ಮುಖ್ಯಮಂತ್ರಿಗಳನ್ನ ಮೆಚ್ಚಿಸೋಕೆ ರಾತ್ರೋರಾತ್ರಿ ರಸ್ತೆಗೆ ಟಾರ್ ಹಾಕಿದ್ದಾರೆ. ಬಣ್ಣನೂ ಬಳಿದು ಫಳಫಳ ಮಿಂಚಿಸಿದ್ದಾರೆ.

ಆದ್ರೆ ಪ್ರಶ್ನೆ ಇರೋದು ಇಲ್ಲೇ. ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ 60 ಹಳ್ಳಿಗಳ ರಸ್ತೆಗಳು ಟಾರನ್ನೇ ನೋಡಿಲ್ಲ. ವಡಗೇರಾ ರಸ್ತೆ ಕೆಲಸ 5 ವರ್ಷದಿಂದ ಆಗ್ತಿದೆ. ಆದ್ರೆ ಮುಖ್ಯಮಂತ್ರಿಗಳನ್ನ ಮೆಚ್ಚಿಸೋಕೆ ಇಂಥಾ ಕೆಲಸ ಮಾಡ್ಬೇಕಾ ಅನ್ನೋದು ಜನರ ಪ್ರಶ್ನೆ. ಈ ಬಗ್ಗೆ ಸಚಿವರನ್ನ ಕೇಳಿದ್ರೆ, ಆಯ್ತು ಬಿಡಿ ಬೇಗ ಸರಿಮಾಡಿಸೋಣ ಅಂತಾರೆ.

ನಮ್ಮ ಮುಖ್ಯಮಂತ್ರಿಗಳಿಗೆ ನಿಜಕ್ಕೂ ಜನಪರ ಕಾಳಜಿ ಇದ್ರೆ, ಇವತ್ತು ಹಳ್ಳಿಗಳ ರಸ್ತೆ ಕಡೆ ಹೋಗಿ ಬರ್ಲಿ. ಆಗ ಅಧಿಕಾರಿಗಳ ಬಣ್ಣ ಬಯಲಾಗುತ್ತೆ ಅಂತಾರೆ ಇಲ್ಲಿನ ಜನ.

Comments

Leave a Reply

Your email address will not be published. Required fields are marked *